ನಿಟ್ಟುವಳ್ಳಿ ಶಾಖಾ ಗ್ರಂಥಾಲಯಕ್ಕೆ ನಿವೇಶನ ಮಂಜೂರು

ದಾವಣಗೆರೆ, ಡಿ.18- ನಿಟ್ಟುವಳ್ಳಿಯಲ್ಲಿ ಶಾಖಾ ಗ್ರಂಥಾಲಯದ ಕಟ್ಟಡ ನಿರ್ಮಿಸಲು ಸ್ವಂತ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಹಾಗೂ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರಿಗೆ ವಾಚನಾಲಯ ಪ್ರಾರಂಭಿಸಲು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಅನುಮೋದನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ 90ನೇ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 19ನೇ ವಾರ್ಡಿನ ಶೇಖರಪ್ಪ ನಗರದಲ್ಲಿನ ಕೊಳಚೆ ಪ್ರದೇಶದ ಗ್ರಂಥಾಲಯವನ್ನು 14ನೇ ವಾರ್ಡಿನಲ್ಲಿ ಪಾಲಿಕೆಯ ವತಿಯಿಂದ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಿಸಿ, ಅಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಲು ತಿಳಿಸಿದರು.

ಕೆಎಸ್ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ವಾಚನಾಲಯ ಪ್ರಾರಂಭಿಸಲು ಅನುಮೋದಿಸಿ, ವಿನೋಬ ನಗರ ಶಾಖಾ ಗ್ರಂಥಾಲಯಕ್ಕೆ ಪಾಲಿಕೆಯಿಂದ ಉಚಿತವಾಗಿ ಕಟ್ಟಡ ಪಡೆಯಲು ಉಪನಿರ್ದೇಶಕರಿಗೆ ಸೂಚನೆ ನೀಡಿ, 20 ಹಾಗೂ 31ನೇ ವಾರ್ಡಿನಲ್ಲಿ ಗ್ರಂಥಾಲಯ ತೆರೆಯಲು ಸೂಚಿಸಿದರು.

ಮೇಯರ್‌ ಕೆ. ಚಮನ್ ಸಾಬ್ ಮಾತನಾಡಿ, ಎಂಸಿಸಿ `ಬಿ’ ಬ್ಲಾಕ್‌ನಲ್ಲಿರುವ ಸೇವಾದಳ ಕಟ್ಟಡದ ಪಕ್ಕದ ಖಾಲಿ ಜಾಗವನ್ನು ಗ್ರಂಥಾಲಯಕ್ಕೆ ಪಡೆಯಲು ಹಾಗೂ ಪಾಲಿಕೆಯ ಉಳಿದ ವಾರ್ಡ್‌ಗಳಲ್ಲಿ ಗ್ರಂಥಾಲಯ ಪ್ರಾರಂಭಿಸಬೇಕೆಂದು ಉಪನಿರ್ದೇಶಕರಿಗೆ ತಿಳಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಧರಾಮ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರೂಪಶ್ರೀ, ರಾಜನಹಳ್ಳಿ ಸೀತಮ್ಮ ಬಾಲಕೀಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಂ.ಪಿ ಮಂಜಪ್ಪ, ಎಂ. ಜಯಕುಮಾರ್, ಪಿ.ಆರ್ ತಿಪ್ಪೇಸ್ವಾಮಿ ಹಾಗೂ ಗ್ರಂಥಾಲಯದ ಸಿಬ್ಬಂದಿ ಇದ್ದರು.

error: Content is protected !!