ದಾವಣಗೆರೆ, ಡಿ. 17- ಒಂದು ದೇಶ ಒಂದು ಚುನಾವಣೆ ನಮ್ಮ ದೇಶಕ್ಕೆ ಕಾರ್ಯ ಸಾಧುವಲ್ಲ. ಇಂದು ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮಂಡಿಸಿದ `ಒಂದು ದೇಶ ಒಂದು ಚುನಾವಣೆ’ ಮೋದಿ ಸರ್ಕಾರದ ಮೂರ್ಖತನದ ಪರಮಾವಧಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಮೋದಿ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ವಿವಿಧ ಭಾಷೆ, ಧರ್ಮ ಹೊಂದಿರುವ ಭಾರತ ದೇಶದಲ್ಲಿ ಆಯಾಕಾಲಕ್ಕೆ ಅನುಗುಣವಾಗಿ ಚುನಾವಣೆಗಳು ನಡೆಯುತ್ತಿವೆ. ಇದೀಗ ಲೋಕಸಭೆ ಮತ್ತು ವಿಧಾನ ಸಭೆಗಳ ಚುನಾವಣೆಗಳನ್ನು ಒಟ್ಟಿಗೆ ಮಾಡಲು ಮಸೂದೆ ಮಂಡಿಸಿರುವುದು ನಮ್ಮ ದೇಶದ ವ್ಯವಸ್ಥೆಗೆ ಸರಿ ಹೊಂದುವುದಿಲ್ಲ ಎಂದಿದ್ದಾರೆ.
`ಒಂದು ದೇಶ ಒಂದು ಚುನಾವಣೆ’ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಇದರಿಂದ ಧಕ್ಕೆ ಉಂಟಾಗಲಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಆಪರೇಷನ್ ಕಮಲದ ಮುಖಾಂತರ ದೇಶದ ಹಲವು ರಾಜ್ಯಗಳನ್ನು ತನ್ನ ಕೈವಶ ಮಾಡಿಕೊಂಡಿರುವ ಪ್ರಧಾನಿ ಮೋದಿ, ಅಮಿತ್ ಶಾ, ಬಿ.ಎಸ್. ಯುಡಿಯೂರಪ್ಪ ಈ ಹಿಂದೆ ಚುನಾಯಿತ ಜನ ಪ್ರತಿನಿಧಿಗಳನ್ನು ಮಾರುಕಟ್ಟೆಯಲ್ಲಿ ಕೋಳಿ, ಕುರಿಗಳಂತೆ ಖರೀದಿಸಿ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿರುವುದು ನಮ್ಮ ಕಣ್ಮುಂದೆ ಇರುವಾಗ ಈ ರೀತಿ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡಿಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.