ವಿಜಯ್ ಕುಮಾರ್ ಎಂ. ಸಂತೋಷ್ ಅಭಿಮತ
ದಾವಣಗೆರೆ, ಡಿ.16- ಹೋಮ್ ಗಾರ್ಡ್ಸ್‌ಗಳಿಗೆ ಶಿಸ್ತು ಮತ್ತು ಒಗ್ಗಟ್ಟು ಬಹಳ ಮುಖ್ಯ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಎಂ. ಸಂತೋಷ್ ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗೃಹರಕ್ಷಕ ದಳದ ಕಾರ್ಯ ನಿಷ್ಕಾಮ ಸೇವೆಯಾಗಿದೆ. ಆದರೆ ಅವರು ಸಮವಸ್ತ್ರ ಧರಿಸಿದ ಬಳಿಕ ಇಲಾಖೆ ಹಾಗೂ ಸಮವಸ್ತ್ರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.
ವಿಶಿಷ್ಟ ಸ್ಥಾನಮಾನವನ್ನು ಗೃಹ ರಕ್ಷಕ ದಳ ಹೊಂದಿದೆ. ಹಾಗಾಗಿ ಕಾನೂನು ಪಾಲನೆ, ಶಿಸ್ತು ಹಾಗೂ ಬದ್ಧತೆಯಿಂದ ಸಮಾಜದ ಸೇವೆಯಲ್ಲಿ ತೊಡಗಬೇಕು. ದೇಶ ಹಾಗೂ ರಾಜ್ಯಕ್ಕೆ ನಿಮ್ಮ ಸೇವೆ ಅನನ್ಯವಾಗಿದೆ ಎಂದು ಶ್ಲಾಘಿಸಿದರು.
ನೈಸರ್ಗಿಕ ವಿಕೋಪ, ನೆರೆ ಹಾವಳಿ ಹಾಗೂ ಸಮಾಜದಲ್ಲಿ ಇತರೆ ತೊಂದರೆಗಳಾದಾಗ ಹೋಮ್ ಗಾರ್ಡ್‌ಗಳು ನಿಷ್ಕಾಮ ಸೇವೆ ಒದಗಿಸುವುದು ಪ್ರಶಂಸನೀಯವಾಗಿದೆ ಎಂದರು.
ಗೃಹರಕ್ಷಕ ದಳ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಸದಸ್ಯರು, ಅಧಿಕಾರಿಗಳಿಗೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಿಬ್ಬಂದಿ ವರ್ಗದ ಮಕ್ಕಳಿಗೆ ಮತ್ತು ಉತ್ತಮ ಘಟಕಾಧಿಕಾರಿ, ಗೃಹ ರಕ್ಷಕ, ರಕ್ಷಕಿ ಸೇರಿದಂತೆ ಸಾಮಾಜಿಕ ಸೇವೆ ಮಾಡಿದ ಸದಸ್ಯರಿಗೆ ಸನ್ಮಾನಿಸಲಾಯಿತು.
ಈ ವೇಳೆ ಹೋಮ್ ಗಾರ್ಡ್ ಕಮಾಂಡೆಂಟ್ ಡಾ.ಎಸ್.ಹೆಚ್. ಸುಜಿತ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.