ಬಸವ ಜಯ ಮೃತ್ಯುಂಜಯ ಶ್ರೀಗಳ ಮೇಲಿನ ಹಲ್ಲೆ ಖಂಡನೀಯ : ಎಂಪಿಆರ್‌

ದಾವಣಗೆರೆ, ಡಿ.15- ಬೆಳಗಾವಿಯಲ್ಲಿ ನಡೆದ 2ಎ ಮೀಸಲಾತಿ ಹೋರಾಟದಲ್ಲಿ ಸಮುದಾಯದವರ ಮೇಲೆ ಮಾತ್ರವಲ್ಲದೇ, ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮೇಲೂ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಗೋಲಿಬಾರ್‌ ನಡೆಸುವ ಮೂಲಕ ಕೂಡಲಸಂಗಮ ಪೀಠದ ಶ್ರೀಗಳನ್ನು ಮುಗಿಸಲು ಪೊಲೀಸ್ ಅಧಿಕಾರಿಗಳು ಸಂಚು ರೂಪಿಸಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಕಿತ್ತೂರು ರಾಣಿ ಚನ್ನಮ್ಮಳ ವಂಶಸ್ಥರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಇದನ್ನು ಎಲ್ಲ ಸಮುದಾಯಗಳ ಮಠಾಧೀಶರು ಖಂಡಿಸಬೇಕು. ಇಲ್ಲವಾದರೆ ಯಾರಿಗೂ ಉಳಿಗಾಲವಿಲ್ಲದಂತಾಗುತ್ತದೆ ಎಂದು ಹೇಳಿದರು.

ಹೋರಾಟಗಾರರು ಕಲ್ಲು ತೂರಾಟ ಮಾಡಿಲ್ಲ. ಹೋರಾಟದ ದಿಕ್ಕು ತಪ್ಪಿಸಲು ಗೃಹ ಸಚಿವರೇ ಕಲ್ಲು ತೂರಾಟ ನಡೆಸಿರಬಹುದು ಎಂದು ಆರೋಪಿಸಿದರು.

`ಲಾಠಿ ಚಾರ್ಜ್‌ ಮಾಡುವ ಬದಲು ಮುತ್ತು ಕೊಡಬೇಕಿತ್ತಾ’ ಎಂದು ಹಗುರವಾಗಿ ಮಾತನಾಡುವ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

2ಎ ಮೀಸಲಾತಿ ಕೇಳುವುದು ನಮ್ಮ ಹಕ್ಕು. ಆದರೆ ನಮ್ಮ ಹಕ್ಕಿಗಾಗಿ ಹೋರಾಡುವಾಗ ಸರ್ಕಾರ ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯನವರು ಕಾವಿ ಬಟ್ಟೆ ವಿರೋಧಿ ಧೋರಣೆ ತೋರಿದ್ದಾರೆ. ಹಾಗಾಗಿ ಕೂಡಲೇ ಮುಖ್ಯ ಮಂತ್ರಿಗಳು ಶ್ರೀಗಳು ಮತ್ತು ಪಂಚಮಸಾಲಿ ಸಮಾಜಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

 ಈ ವೇಳೆ ಬಿಜೆಪಿ ಮುಖಂಡರಾದ ಮಾಡಾಳ್‌ ಮಲ್ಲಿಕಾರ್ಜುನ್‌, ಲೋಕಿಕೆರೆ ನಾಗರಾಜ್‌, ಬಿ.ಜಿ ಅಜಯ್‌ ಕುಮಾರ್‌, ಚಂದ್ರಶೇಖರ್‌ ಪೂಜಾರ್‌, ಮಾಜಿ ಶಾಸಕ ಅರುಣ್‌ ಕುಮಾರ್‌, ದಯಾನಂದ, ಜಯರುದ್ರೇಶ್‌, ಕಿರಣ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!