ರಾಣೇಬೆನ್ನೂರು, ಡಿ. 15- ಇತ್ತೀಚೆಗೆ ಹೊಳೆಯಲ್ಲಿ ಈಜಾಡಲು ಹೋಗಿದ್ದ ಗ್ರಾಮದ ರಾಕೇಶ ಕೋಲೇರ ಹಾಗೂ ಸಂತೋಷ ಚನ್ನಗೌಡ್ರ ಈ ಇಬ್ಬರು ವಿದ್ಯಾರ್ಥಿಗಳು ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ಸಾವನ್ನಪ್ಪಿದ್ದು, ಕಾರಣ ಶಿಕ್ಷಕರೇ ಹಣ ಖರ್ಚು ಮಾಡಿ ಶಾಲಾ ಕಾಂಪೌಂಡ್ ನಿರ್ಮಿಸಿ, ಗೇಟ್ ಸರಿಪಡಿಸುವಂತೆ ಹೊಣೆಗಾರಿಕೆಯನ್ನು ಗ್ರಾಮಸ್ಥರು ವಿಧಿಸಿದ್ದಾರೆಂದು ಗೊತ್ತಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಎಸ್ಡಿಎಂಸಿ, ಗ್ರಾ.ಪಂ. ಸದಸ್ಯರ ಹಾಗೂ ಗ್ರಾಮದ ಹಿರಿಯರು ನಡೆಸಿದ ಸಭೆಯಲ್ಲಿ, ಶಾಲೆಯ ತರಗತಿಗಳು ನಡೆಯುತ್ತಿದ್ದಾಗ ಈ ಬಾಲಕರು ಗ್ರಾಮದಲ್ಲಿ ಹರಿಯುತ್ತಿರುವ ಕುಮದ್ವತಿ ನದಿಗೆ ತೆರಳಿದ್ದು, ಶಿಕ್ಷಕರ ಬೇಜವಾಬ್ದಾರಿತನ ಎನ್ನುವ ಆರೋಪ ಬಲವಾಗಿ ಕೇಳಿಬಂದಿದ್ದು, ಅವರ ಸಾವಿಗೆ ಶಿಕ್ಷಕರಿಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ನೋಟಿಸು: ಲಿಂಗದಹಳ್ಳಿಯಲ್ಲಿ ನಡೆದ ಬಾಲಕರ ಸಾವಿನ ಘಟನೆಗೆ ಕಾರಣ ಕೇಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಇಲಾಖೆ ನೋಟಿಸು ನೀಡಿದ್ದು, ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಯ ಶಿಕ್ಷಕರಿಗೂ ಸಹ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.