ದಾವಣಗೆರೆ, ಡಿ.15- ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೆ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿ ಸಬೇಕೆಂದು ಆಗ್ರಹಿಸಿ ನಾಳೆ 16ರ ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದೆ.
ಈ ಕುರಿತಂತೆ ಇಲ್ಲಿನ ಶಾಸಕರುಗಳ ಮನೆ ಮುಂಭಾಗ ತಮಟೆ ಚಳುವಳಿ ನಡೆಸಿ ಒಳ ಮೀಸಲಾತಿ ಬಗ್ಗೆ ಚರ್ಚಿಸುವಂತೆ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ಆಗಸ್ಟ್ 1ರಂದು ಒಳ ಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರೂ ಈ ಬಗ್ಗೆ ಗಮನ ಹರಿಸದೆ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಒಳ ಮೀಸಲಾತಿ ಶಿಫಾರಸ್ಸು ಮಾಡುವ ನಿರ್ಧಾರ ಮಾಡಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಬೆಂಬಲ ನೀಡಿದ್ದರು ಎಂದ ಹೇಳಿದರು.
ಹರಿಯಾಣದ ಬಿಜೆಪಿ ಸರ್ಕಾರವು ಸುಪ್ರೀಂಕೋರ್ಟಿನ ತೀರ್ಪು ಬಂದ ಮೊದಲ ವಾರದಲ್ಲೆ ಒಳ ಮೀಸಲಾತಿ ಜಾರಿ ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಆಲೂರು ಬಸವರಾಜ್, ಎಂ. ಅಂಜಿನಪ್ಪ, ಹರೀಶ್ ಹೊನ್ನೂರು, ಬಿ. ಹಾಲೇಶ್, ಕೆ.ಹೆಚ್. ಅವಿನಾಶ್ ಮತ್ತು ದಲಿತ ಸಮಾಜದ ಮುಖಂಡರು ಇದ್ದರು.