ಇ-ಟೆಂಡರ್‌ ಹಳ್ಳಿಗಳಲ್ಲಿನ ಖರೀದಿಗೂ ವಿಸ್ತರಿಸಲಿ

ರೈತ ಒಕ್ಕೂಟದ ಆಗ್ರಹ

ದಾವಣಗೆರೆ, ಡಿ.12- ಹಳ್ಳಿಗಳಲ್ಲಿನ ಖರೀದಿ ವಹಿವಾಟಿಗೂ ಇ-ಟೆಂಡರ್ ಪದ್ಧತಿ ಜಾರಿ ಮಾಡ ಬೇಕು ಎಂದು ಜಿಲ್ಲಾ ರೈತರ ಒಕ್ಕೂಟ ಆಗ್ರಹಿಸಿದೆ.

ಗುರುವಾರ ಬೆಳವನೂರಿನ ರೈತ ಮುಖಂಡ ನಾಗೇಶ್ವರ್‌ರಾವ್ ನಿವಾಸದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ರೈತ ಮುಖಂಡರಾದ ಬಿ.ಎಂ.ಸತೀಶ್ ಕೊಳೇನಹಳ್ಳಿ, ಬಿ.ನಾಗೇಶ್ವರ ರಾವ್ ಮಾತನಾಡಿ, ಅನ್ನದಾತರ ಪಾಲಿಗೆ ಇ-ಟೆಂಡರ್ ವರವಾಗಿದೆ ಎಂದರು.

ದಾವಣಗೆರೆ ಎಪಿಎಂಸಿಗೆ ಶೇ 20 ರಷ್ಟು ಮಾತ್ರ ಉತ್ಪನ್ನಗಳು ಬರುತ್ತಿವೆ. ಉಳಿದ ಶೇ. 80 ರಷ್ಟು ಹಳ್ಳಿಗಳಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿನ ವಹಿವಾಟಿಗೂ ಇ-ಪದ್ಧತಿ ಜಾರಿಗೊಳಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಇ ಟೆಂಡರ್‌ನಿಂದ ದಲಾಲರು, ಮಧ್ಯವರ್ತಿಗಳ ಮಧ್ಯಸ್ಥಿಕೆ ಇಲ್ಲದೇ, ರೈತರಿಂದ ಖರೀದಿದಾರರಿಗೆ ನೇರವಾಗಿ ವ್ಯಾಪಾರ, ವಹಿವಾಟು ಆಗುತ್ತದೆ. ರೈತರ ಶೋಷಣೆ, ವಂಚನೆಗೆ ಆಸ್ಪದ ಇರುವುದಿಲ್ಲ. ವೇಮೆಂಟ್ ತೂಕವಾಗುವುದರಿಂದ ತೂಕದಲ್ಲಿ, ಪೇಮೆಂಟ್‌ನಲ್ಲಿ ವಂಚಿಸುವುದಕ್ಕೆ ಸಾಧ್ಯವೇ ಇಲ್ಲ. ಮಾರುಕಟ್ಟೆಗೆ ತರುವ ಸಾಗಾಣಿಕೆ ವೆಚ್ಚ, ಮಾರುಕಟ್ಟೆಯಲ್ಲಿ ಸುರಿದು ಚೀಲಕ್ಕೆ ತುಂಬಿ, ತೂಕ ಮಾಡಿ, ಲೋಡ್ ಮಾಡುವ ಮಾನವ ಶ್ರಮ ತಪ್ಪುತ್ತದೆ. ವೇಮೆಂಟ್-ಪೇಮೆಂಟ್ ಕಂಡೀಷನ್ ಜಾರಿಗೊಳಿಸಲು ಸುಲಭವಾಗುತ್ತದೆ ಎಂದು  ಹೇಳಿದರು. 

ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 11 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆಗಳ ಬಳಿ ವೇಬ್ರಿಡ್ಜ್ ಆರಂಭಿಸಿ, ಅದನ್ನು ಸರ್ಕಾರವೇ ನಿರ್ವಹಿಸುವ ಮಹತ್ವದ ತೀರ್ಮಾನ ಕೈಗೊಂಡಿರುವುದನ್ನು ಒಕ್ಕೂಟ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದರು. 

ಒಕ್ಕೂಟದ ಕುಂದುವಾಡದ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಎ.ಪ್ರಕಾಶ, ಆರನೇ ಕಲ್ಲು ವಿಜಯಕುಮಾರ್‌ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!