ಶುಕ್ರವಾರ ಮತ್ತೆ ಚುನಾವಣಾ ಸಭೆ ನಿಗದಿ: ಅವಿರೋಧ ಆಯ್ಕೆ ನಿಶ್ಚಿತ
ಮಲೇಬೆನ್ನೂರು, ಡಿ.12- ಕೋರಂ ಇಲ್ಲದ ಕಾರಣ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಯನ್ನು ಮುಂದೂಡಿದ ಘಟನೆ ಗುರುವಾರ ಮಲೇಬೆನ್ನೂರು ಪುರಸಭೆಯಲ್ಲಿ ನಡೆಯಿತು.
ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು 9 ಸದಸ್ಯರ ಅಗತ್ಯವಿತ್ತು. ಆದರೆ ಸಭೆಯಲ್ಲಿ ಜೆಡಿಎಸ್‌ನ 3 ಮತ್ತು ಬಿಜೆಪಿಯ 3 ಸೇರಿ ಒಟ್ಟು 6 ಸದಸ್ಯರು ಮಾತ್ರ ಹಾಜರಿದ್ದ ಕಾರಣ ಕೋರಂ ಕೊರತೆ ಉಂಟಾಯಿತು. ಆಗ ಚುನಾವಣಾಧಿಕಾರಿ ಯಾಗಿದ್ದ ತಹಶೀಲ್ದಾರ್ ಗುರುಬಸವರಾಜ್ ಅವರು ಚುನಾವಣೆಯನ್ನು ನಾಳೆ ದಿನಾಂಕ 13ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.
ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದ್ದು, 23ನೇ ವಾರ್ಡಿನ ಜೆಡಿಎಸ್‌ನ ಸದಸ್ಯ ಹನುಮಂತಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್‌ನ 17 ಸದಸ್ಯರು ಗೈರು ಹಾಜರಾಗಿದ್ದರು. ಅಲ್ಲದೆ, ಸಂಸದರು, ಶಾಸಕರು ಕೂಡಾ ಇಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದು, ಅವರೂ ಕೂಡಾ ಅಧಿವೇಶನದ ಹಿನ್ನೆಲೆಯಲ್ಲಿ ಗೈರು ಆಗಿದ್ದರು.
ಒಟ್ಟು 23 ಪುರಸಭೆ ಸದಸ್ಯರಲ್ಲಿ ಕಾಂಗ್ರೆಸ್-17, ಜೆಡಿಎಸ್-3 ಮತ್ತು ಬಿಜೆಪಿ -3 ಸದಸ್ಯರನ್ನು ಹೊಂದಿದೆ.
ಗುರುವಾರ ನಡೆದ ಚುನಾವಣಾ ಪ್ರಕ್ರಿಯೆ ಯಲ್ಲಿ ಜೆಡಿಎಸ್ ಸದಸ್ಯರಾದ ಹನುಮಂತಪ್ಪ, ಶ್ರೀಮತಿ ತಹಸೀನಾಬಾನು ಯುಸೂಫ್, ಶ್ರೀಮತಿ ನಾಜೀಮಬಾನು, ಜಮೀರ್‌ಬಾಷಾ ಮತ್ತು ಬಿಜೆಪಿ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಶ್ರೀಮತಿ ಮೀನಾಕ್ಷಮ್ಮ, ಜಿಗಳೇರ್ ಹಾಲೇಶಪ್ಪ, ಶ್ರೀಮತಿ ಸುಲೋಚನಮ್ಮ, ಓ.ಜಿ. ಕುಮಾರ್ ಹಾಜರಿದ್ದರು.
ಗುರುವಾರ ಚುನಾವಣಾ ಸಭೆಗೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಸದಸ್ಯರು, ಶುಕ್ರವಾರ ನಡೆಯಲಿರುವ ಸಭೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ಕಾಂಗ್ರೆಸ್ ಸದಸ್ಯರು ಶುಕ್ರವಾರವೂ ಗೈರು ಹಾಜರಾದರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಹನುಮಂತಪ್ಪ ಅವರನ್ನು ಕಾನೂನು ಪ್ರಕಾರ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅವರಂತೆ ನಾವೂ ಗೈರು ಹಾಜರಾಗಿದ್ದೇವೆ : ಈ ಹಿಂದೆ ನಡೆದ ಪುರಸಭೆ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಗೈರು ಹಾಜರಾಗಿದ್ದರು. ಅದಕ್ಕೆ ನಾವೂ ಕೂಡಾ ಗುರುವಾರ ಚುನಾವಣಾ ಸಭೆಗೆ ಬರಲಿಲ್ಲ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ತಿಳಿಸಿದರು.