ಸ್ಲಂ ನಿವಾಸಿಗಳ ಬಗ್ಗೆ ನಿರ್ಲಕ್ಷ್ಯ ಖಂಡಿಸಿ ನಾಳೆ ಸ್ಲಂ ಜನಾಂದೋಲನ ಪ್ರತಿಭಟನೆ

ದಾವಣಗೆರೆ, ಡಿ. 11-  ರಾಜ್ಯ ಸರ್ಕಾರದ ನಿರ್ಲಕ್ಷ್ಯೆ ಧೋರಣೆ ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯಿಂದ ನಾಡಿದ್ದು ದಿನಾಂಕ 13 ರ ಶುಕ್ರವಾರ ಬೆಳಗಾವಿ ಸುವರ್ಣ ಸೌಧದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಎಸ್.ಎಲ್. ಆನಂದಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಂಘಟನೆ ಕಾರ್ಯಕರ್ತರು ಪ್ರತಿ ಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೇ ಸ್ಲಂ ನಿವಾಸಿಗಳನ್ನು ಸರ್ಕಾರ ನಿರ್ಲಕ್ಷ್ಯೆ ಮಾಡುತ್ತಿರುವು ದನ್ನು ಗಮನಿಸಿದ್ದೇವೆ. 2024-25 ನೇ ಸಾಲಿನ ಬಜೆಟ್‌ನಲ್ಲಿ ಕೇವಲ 30 ಕೋಟಿ ರೂ.ಗಳನ್ನು ಸ್ಲಂಗಳ ಅಭಿವೃದ್ಧಿಗೆ ನೀಡಿರುವುದು ನಗರ ವಂಚಿತ ಸಮುದಾಯಗಳನ್ನು ಅಪಮಾನಿಸಲಾಗಿದೆ ಎಂದರು.

ಸಾಮಾಜಿಕ ನ್ಯಾಯ ಸರ್ಕಾರದ ಪ್ರಮುಖ ಗುರಿಯಾಗಿದ್ದರೂ ಸಹ ಸ್ಲಂ ಜನರನ್ನು ಒಂದು ಸಮುದಾಯವಾಗಿ ಗುರುತಿಸುವಲ್ಲಿ ವಿಫಲವಾಗಿದೆ. ಇದರ ಜೊತೆಯಲ್ಲಿ ನಗರದ ಸ್ಲಂ ಜನರ ಕಷ್ಟದ, ಅನುಭವವಿಲ್ಲದ ವಸತಿ ಜಮೀರ್ ಅಹಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ರಿಯಲ್ ಎಸ್ಟೇಟ್ ಉದ್ಯಮಿಗಳ ಮತ್ತು ಮೇಲ್ವರ್ಗಗಳ ಪರವಾದಂತಹ ನಿಲುವುಗಳನ್ನು ಹೊಂದಿದ್ದು, ಇದರಿಂದಾಗಿ ಸ್ಲಂಗಳ ಅಭಿವೃದ್ಧಿ ನೆಲಕಚ್ಚಿದೆ ಎಂದು ಹೇಳಿದರು.

ಖಾಸಗಿ ಮಾಲೀಕತ್ವದ 710 ಕ್ಕೂ ಹೆಚ್ಚು ಸ್ಲಂಗಳು ಘೋಷಣೆಯಾಗಿ 1.50 ಲಕ್ಷ ಕುಟುಂಬಗಳು ಜೀವನ ಸಾಗಿಸುತ್ತಿವೆ. ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಬದ್ಧತೆ ಪ್ರದರ್ಶಿಸುವುದಿರಲಿ 1973 ರ ಸ್ಲಂ ಕಾಯಿದೆ ವಿರುದ್ಧವಾಗಿ ಕಳೆದ ಎರಡು ವರ್ಷಗಳಿಂದ ಖಾಸಗಿ ಸ್ಲಂಗಳನ್ನು ಘೋಷಿಸುವುದನ್ನೇ ನಿಲ್ಲಿಸಲಾಗಿದೆ. ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.80.253 ಮನೆಗಳನ್ನು ವಿವಿಧ ನಗರ, ಪಟ್ಟಣಗಳಲ್ಲಿ  ನಿರ್ಮಿಸಲಾಗುತ್ತಿದ್ದು, ಇದುವರೆಗೂ ಅಂದಾಜು 60.789 ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರ ಮಾಡಿರುವುದನ್ನು ಹೊರತುಪಡಿಸಿದರೆ ಉಳಿದ 1.20.000 ಕುಟುಂಬಗಳು ಅತಂತ್ರವಾಗಿವೆ ಎಂದರು.

ಸ್ಲಂ ಜನರಿಗೆ ಹಕ್ಕುಪತ್ರ, ನೋಂದಣಿ, ಇ-ಖಾತಾ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು. 2025-26 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೇಣುಕಾ ಯಲ್ಲಮ್ಮ, ಪರ್ವಿನ್ ಬಾನು, ಅಕ್ಕಿ ರಾಮಚಂದ್ರಪ್ಪ, ಮಂಜುಳ, ಬಾಲಪ್ಪ, ಜಂಶಿದಬಾನು ಉಪಸ್ಥಿತರಿದ್ದರು.

error: Content is protected !!