ದಾವಣಗೆರೆ, ಡಿ. 11- ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ `ಸ್ವಪ್ನಾ ಬುಕ್ ಹೌಸ್’ ಇದರ 23 ನೇ ನೂತನ ಶಾಖೆ ಇದೇ ದಿನಾಂಕ 13 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸ್ವಪ್ನಾ ಬುಕ್ ಹೌಸ್ ಮಾಲೀಕರೂ ಆದ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರಸ್ವಾಮಿ ಶಾಖೆಯನ್ನು ಉದ್ಘಾಟಿಸಿದ ನಂತರ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸುವರು. ಎಸ್ಪಿ ಉಮಾ ಪ್ರಶಾಂತ್ ದೀಪಾರಾಧನೆ ಮಾಡುವರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಇದೇ ವೇಳೆ ಬಸವ ಕಲಾ ಲೋಕದ ಅರುಣ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸ್ವಪ್ನಾ ಬುಕ್ ಹೌಸ್ ಮಾಲೀಕರಾದ ನಿತಿನ್ ಷಾ ಮಾತನಾಡಿ, ಸ್ವಪ್ನಾ ಬುಕ್ ಹೌಸ್ ಜ್ಞಾನ ಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ 500 ಕ್ಕೂ ಹೆಚ್ಚು ಬರಹಗಾರರ 7000 ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 22 ಶಾಖೆಗಳನ್ನು ಹೊಂದಿದೆ. ಭಾರತದ ದೊಡ್ಡ ಪುಸ್ತಕ ಮಳಿಗೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಪುಸ್ತಕ ಸಂಸ್ಕೃ ತಿ ಬೆಳೆಸುವಲ್ಲಿ ಸ್ವಪ್ನ ಬುಕ್ ಹೌಸ್ ಅಮೂಲ್ಯ ಕೊಡುಗೆ ನೀಡಿದೆ. ದಾವಣಗೆರೆ ನಗರಕ್ಕೆ ಬುಕ್ ಹೌಸ್ ಅಗತ್ಯವಿತ್ತು. ಸಾಹಿತ್ಯಾಸಕ್ತರಿಗೆ ಸಂತಸವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಪ್ನ ಬುಕ್ ಹೌಸ್ ಸಂಸ್ಥೆಯ ದೊಡ್ಡೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ಗಂಗಾಧರಯ್ಯ ಹಿರೇಮಠ ಉಪಸ್ಥಿತರಿದ್ದರು.