ದಾವಣಗೆರೆ, ಡಿ. 11- ಪ್ರತಿಮಾ ಸಭಾ ಮತ್ತು ಸ್ವರಮಯಿ (ಪುಣೆ) ಇವರ ವತಿಯಿಂದ ಸಾಂಸ್ಕೃತಿಕ ಚೇತನ, ಜಾನಪದ ತಜ್ಞ ಡಾ. ಎಂ. ಜಿ. ಈಶ್ವರಪ್ಪ ಹಾಗೂ ಸ್ವರ ಯೋಗಿನಿ ಡಾ. ಪ್ರಭಾ ಅತ್ರೆ ಸ್ಮರಣಾರ್ಥ ಇದೇ ದಿನಾಂಕ 15 ರಂದು ಸಂಜೆ 5.30 ಕ್ಕೆ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ಎಸ್.ಎಸ್.ಎಂ.ಸಭಾಂಗಣದಲ್ಲಿ `ಸ್ವರಾಂಜಲಿ’ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಮಾ ಸಭಾದ ಅಧ್ಯಕ್ಷ ಬಾ.ಮ.ಬಸವರಾಜಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಮಾ ಸಭಾ ಗೌರವಾಧ್ಯಕ್ಷ ಪ್ರೊ.ಎಸ್. ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪಂಡಿತ್ ವೆಂಕಟೇಶ್ ಕುಮಾರ್, ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರೂ, ಡಾ.ಪ್ರಭಾ ಅತ್ರೆ ಅವರ ಶಿಷ್ಯ ಡಾ. ಚೇತನಾ ಪಾಠಕ್, ದಿ.ಡಾ.ಎಂ.ಜಿ. ಈಶ್ವರಪ್ಪ ಪ್ರೊ.ಬಸಮ್ಮ ಅವರ ಪುತ್ರ ಪೃಥುವೈನ್ಯ `ಸ್ವರಾಂಜಲಿ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕೇಶವ ಜೋಷಿ, ಸಂತೋಷ್ ಹೂಗಾರ, ಗುರುಪ್ರಸಾದ್ ಹೆಗಡೆ, ಶ್ರೀಶೈಲ ಬಿರಾದಾರ ಅವರುಗಳು ಪಕ್ಕವಾದ್ಯದೊಂದಿಗೆ ಸಾಥ್ ನೀಡಲಿದ್ದಾರೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಲ್ಲೇಶ್, ಕೋಶಾಧ್ಯಕ್ಷ ಸಂಪನ್ನ ಮುತಾಲಿಕ್, ಸಹ ಕಾರ್ಯದರ್ಶಿ ಎಸ್.ಎಸ್. ಸಿದ್ಧರಾಜ್, ನಾಗರಾಜ್ ಸಿರಿಗೆರೆ ಉಪಸ್ಥಿತರಿದ್ದರು.