ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಶಾಖೆ ಅಸ್ತಿತ್ವಕ್ಕೆ

ದಾವಣಗೆರೆ, ಡಿ. 11- ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ (ಹೆಚ್.ಕೆ.ಆರ್. ಬಣ)ವನ್ನು 2025 ರ ಜನವರಿ ತಿಂಗಳಲ್ಲಿ ಅಸ್ತಿತ್ವಕ್ಕೆ ತರುವುದಾಗಿ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ವಿಶಾಲಾಕ್ಷಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 40 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ (ಎಐಟಿಯುಸಿ) ಸಂಘಟನೆಯ ಜಿಲ್ಲಾಧ್ಯಕ್ಷರಾಗಿದ್ದ ಎಂ.ಬಿ. ಶಾರದಮ್ಮ ಅವರನ್ನು ಉಚ್ಚಾಟನೆ ಮಾಡಿದ್ದರಿಂದ, ಬೇಸತ್ತು ಹೊಸ ಬಣವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದರು.

ಸಿಪಿಐ ಜಿಲ್ಲಾ ಸಮಿತಿ ಖಜಾಂಚಿಯಾಗಿದ್ದ ಆನಂದರಾಜ್ ಅವರ ನಿಧನದ ನಂತರ ಅಂಗನವಾಡಿ ಕಾರ್ಯಕರ್ತೆಯರು  ಮತ್ತು ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಎಂ.ಬಿ. ಶಾರದಮ್ಮ ಅವರನ್ನು, ಖಜಾಂಚಿಯಾಗಿ ನೇಮಿಸಲಾಗಿತ್ತು. ಆದರೂ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ನೂತನ ಬಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನೂತನ ಸಂಘದ ಮೂಲಕವೇ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುವರೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚೌಡಮ್ಮ, ಕಾಳಮ್ಮ, ಜೆ.ಎಂ. ಉಮಾ, ಎಂ. ಸರ್ವಮ್ಮ, ಅನಸೂಯ, ಜಲಜಾಕ್ಷಿ, ವಿಜಯ, ರೇಣುಕಾ, ರೂಪ, ದೀಪ ಉಪಸ್ಥಿತರಿದ್ದರು. 

error: Content is protected !!