ದಾವಣಗೆರೆ, ಡಿ. 10- ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನ ವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಶನ್ ವತಿಯಿಂದ ನಾಡಿದ್ದು ದಿನಾಂಕ 12 ರ ಗುರುವಾರ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕರಿಯರಿಗೆ 10 ಸಾವಿರ ಗೌರವ ಧನ ಹೆಚ್ಚಿಸು ವುದು, ನಿವೃತ್ತಿ ಯಾದವರಿಗೆ ಮೂರು ಲಕ್ಷ ಇಡಿಗಂಡು ನೀಡುವ ಆರನೇ ಗ್ಯಾರಂಟಿ ಜಾರಿಗೊಳಿಸಬೇಕು. ಅಂಗ ನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರ್ಯಾಚುಟಿ ಪಡೆಯಲು ಅರ್ಹರು ಎಂಬ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೊಳಿಸಬೇಕು ಎಂದರು.
ಹಿಂದಿನ ಸರ್ಕಾರ ದಿನಾಂಕ 1-4-2023 ರಿಂದ ನಿವೃತ್ತಿಯಾದವರಿಗೆ ಗ್ರಾಚ್ಯುಟಿ ನೀಡಬೇಕೆಂದು ಆದೇಶ ನೀಡಿದೆ. ಅದನ್ನು ಮಾರ್ಪಡಿಸಿ ನಿವೃತ್ತರಾದ ಎಲ್ಲರಿಗೂ ಅನ್ವಯವಾಗುವಂತೆ ಆದೇಶಿಸಬೇಕು. ಅನಾರೋಗ್ಯ ಪೀಡಿತರಾಗಿರುವವರಿಗೆ ಪರಿಹಾರ ಧನ ಮೂರು ಲಕ್ಷ ನೀಡಿ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸು ವಂತೆ, ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಜಾರಿ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಹಾಯಕಿಯರನ್ನು ನೇಮಿಸಬೇಕು ಹಾಗೂ ಗೌರವಧನ ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಬಿ.ಎಲ್.ಓ. ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು, ಎನ್.ಕೆ. ಪಾಟೀಲ್ ಅವರ ವರದಿಯನ್ನು ಜಾರಿ ಮಾಡಿ ಯೋಜನೇತರ ಸರ್ವೇ ಕೆಲಸಗಳಿಂದ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಫೆಡರೇಶನ್ ಪದಾಧಿಕಾರಿಗಲಾದ ವಿಜಯ ಕುಮಾರಿ, ಕೆ.ಸಿ. ನಿರ್ಮಲ್, ಕುಸುಮ, ಹೆಚ್.ಜಿ. ಮಂಜುಳ, ರೂಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.