ದಾವಣಗೆರೆ, ಡಿ. 10 – ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಅಡಿಕೆ ಬೆಳೆಗಾರರ ಹಿತವನ್ನು ದೃಷ್ಟಿ ಯಲ್ಲಿಟ್ಟುಕೊಂಡು ಅಡಿಕೆ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿಂದು ಪ್ರಶ್ನೋತ್ತರ ವೇಳೆ ಚುಕ್ಕೆ ಇಲ್ಲದ ಪ್ರಶ್ನೆ ಕೇಳಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅಡಿಕೆ ಆಮದಿನಿಂದ ದೇಶದ ಅಡಿಕೆ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗದೇ ತೊಂದರೆ ಆಗುತ್ತಿದೆ ಎಂದು ಸದನದ ಗಮನಕ್ಕೆ ತಂದರು. ಅಡಿಕೆ ಆಮದು ನಿಷೇಧದ ಜೊತೆಗೆ ಅಡಿಕೆಯಿಂದ ಮಾಡುವ ಉಪ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದ ಅವರು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಕೇಂದ್ರ ಕೃಷಿ ಮತ್ತು ತೋಟಗಾರಿಕೆ ಸಚಿವರಿಗೆ ಮನವಿ ಮಾಡಿದರು.
ಖೇಲೋ ಇಂಡಿಯಾ ಕ್ರೀಡಾಂಗಣಕ್ಕೆ ಒತ್ತಾಯ : ಅದೇ ರೀತಿ ಕೇಂದ್ರ ಕ್ರೀಡಾ ಸಚಿವರಿಗೆ ಖೇಲೋ ಇಂಡಿಯಾ ಯೋಜನೆಯಡಿ ದಾವಣಗೆರೆಯಲ್ಲಿ ಕ್ರೀಡಾಂಗಣ ಅನುಷ್ಠಾನ ಮತ್ತು ಅಭಿವೃದ್ಧಿಯ ಬಗ್ಗೆ ಗಮನ ಸೆಳೆದರು.