ದಾವಣಗೆರೆ, ಡಿ. 10- ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಅವರು ದಾವಣಗೆರೆ ಮತ್ತು ದಾವಣಗೆರೆ ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಾವಣಗೆರೆಗೆ ಅವರು ನೀಡಿದ ಕೊಡುಗೆ ಮರೆಯಲು ಸಾಧ್ಯವಿಲ್ಲ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ
ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಕೃಷ್ಣ ಸಹಕಾರದಿಂದ ದಾವಣಗೆರೆಗೆ ದಾಖಲೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದನ್ನು ಅವರು ನೆನಪಿಸಿದ್ದಾರೆ.
ದಾವಣಗೆರೆ ನಗರಕ್ಕೆ 15 ಸಾವಿರ ಆಶ್ರಯ ಮನೆಗಳನ್ನು ನೀಡಲಾಯಿತು. ಕುಂದುವಾಡ ಕೆರೆ ನಿರ್ಮಾಣ, ಟೆನ್ನಿಷ್ ಕೋರ್ಟ್ ನಿರ್ಮಾಣ, ನಗರದ ಉದ್ದಗಲಕ್ಕೂ ಸಿಮೆಂಟ್ ರಸ್ತೆ ಸೇರಿದಂತೆ ದಾವಣಗೆರೆ ನಗರ ಹಾಗೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದನ್ನು ಡಿ. ಬಸವರಾಜ್
ಸ್ಮರಿಸಿದ್ದಾರೆ.
ರಾಜ್ಯದಲ್ಲಿ ವಿಕಾಸ ಸೌಧ ನಿರ್ಮಾಣ, ಉದ್ಯೋಗ ಸೌಧ ನಿರ್ಮಾಣ, ಸ್ತ್ರೀ ಶಕ್ತಿ ಸಂಘಗಳ ಸ್ಥಾಪನೆ ಮಾಡಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದರು ಎಂದು ಬಸವರಾಜ್ ಸ್ಮರಿಸಿದ್ದಾರೆ.