ದಾವಣಗೆೆರೆ, ಡಿ. 10 – ಜನರಿಗೆ ಸ್ವದೇಶಿ ವಸ್ತುಗಳನ್ನು ಪರಿಚಯ ಮಾಡಿಸುವ ಸದುದ್ದೇಶ ಹಾಗೂ ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಇದೇ ದಿನಾಂಕ 11 ರಿಂದ 15 ರವರೆಗೆ ಮೂರು ದಿನಗಳ ಕಾಲ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ `ಬೃಹತ್ ಸ್ವದೇಶಿ ಮೇಳ’ ಆಯೋಜಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್- ಕರ್ನಾಟಕದ ಕೆ. ಜಗದೀಶ್ ಮಾಹಿತಿ ನೀಡಿದರು.
ಈ ಮೇಳದಲ್ಲಿ ಸುಮಾರು 250 ಕ್ಕೂ ಹೆಚ್ಚು ವಿವಿಧ ರೀತಿಯ ಮಳಿಗೆಗಳು ತೆರೆಯಲಿವೆ. ದೇಶೀಯ ಕ್ರೀಡೆ, ದೇಶೀಯ ಆಹಾರಗಳು, ದೇಶೀಯ ಉಡುಗೆ-ತೊಡುಗೆಗಳು, ದೇಶಿಯ ಹಸುಗಳ ಪ್ರದರ್ಶನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ತರಬೇತಿ ಶಿಬಿರಗಳನ್ನು ಏರ್ಪಾಡು ಮಾಡಲಾಗುವುದು ಎಂದರು.
ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸುವ ನಿರೀಕ್ಷೆ ಇದೆ. ದಿನಾಂಕ 11 ರಂದು ಸಂಜೆ 5.30 ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ಕನ್ನಡ ಚಿತ್ರನಟಿ ತಾರಾ ಅನುರಾಧ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಸ್ವದೇಶಿ ಚಿಂತಕ ಶಿವಮೊಗ್ಗದ ಕುಮಾರಸ್ವಾಮಿ ಭಾಗವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕ ಎಸ್.ಟಿ. ವೀರೇಶ, ಎಸ್. ಚೇತನ್, ಮಂಜುಳಾ ಮಹೇಶ್, ಪ್ರದೀಪ್, ಶರತ್ ಮತ್ತಿತರರಿದ್ದರು.