ಮಲೇಬೆನ್ನೂರು, ಡಿ.10- ಇಲ್ಲಿನ ನೀರಾವರಿ ಕಛೇರಿಗೆ ಮಂಗಳವಾರ ಭೇಟಿ ನೀಡಿದ ಮಾಜಿ ಶಾಸಕ ಎಸ್ ರಾಮಪ್ಪ ಅವರು ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸೌಡಿಗಳ ಜೊತೆ ಸಮಸ್ಯೆ ಕುರಿತು ಚರ್ಚಿಸಿದರು. ಹಲವಾರು ತಿಂಗಳುಗಳಿಂದ ವೇತನವಿಲ್ಲದೆ ತೊಂದರೆಯಲ್ಲಿದ್ದೇವೆ ಎಂದು ದಿನಗೂಲಿ ನೌಕರರು ತಮ್ಮ ಅಳಲನ್ನು ತೋಡಿಕೊಂಡರು.
ಕೂಡಲೇ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಿಸಿದ ಟೆಂಡರ್ ದಾರರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ವೇತನ ಬಿಡುಗಡೆ ಮಾಡುವಂತೆ ಪಟ್ಟು ಹಿಡಿದ ಪರಿಣಾಮ ಟೆಂಡರ್ ದಾರರು ಅಧಿಕಾರಿಗಳೊಂದಿಗೆ ಟೆಂಡರ್ ಅಗ್ರಿಮೆಂಟ್ ಗೆ ಸಹಿ ಮಾಡಿದರು. ಅಗ್ರಿಮೆಂಟ್ ಮಾಡಿಕೊಂಡಿರುವ ಟೆಂಡರ್ ದಾರರು ಕೂಡಲೇ 2 ತಿಂಗಳ ವೇತನವನ್ನೂ ಸೌಡಿಗಳ ಖಾತೆಗೆ ನೀಡಲು ಒಪ್ಪಿದ್ದು, ಇನ್ನುಳಿದ ವೇತನವನ್ನು ಸಹ ಮುಂದಿನ ದಿನಗಳಲ್ಲಿ ತಡಮಾಡದೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಾಕಿ ವೇತನ ಬಿಡುಗಡೆಗೆ ಶ್ರಮವಹಿಸಿದ ಮಾಜಿ ಶಾಸಕ ಎಸ್.ರಾಮಪ್ಪ ಅವರನ್ನು ದಿನಗೂಲಿ ನೌಕರರು ಅಭಿನಂದಿಸಿದರು.