ದಾವಣಗೆರೆ, ಡಿ.9- ಕಬ್ಬಿಗೆ 5500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಾಡಿದ್ದು ದಿನಾಂಕ 12 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಲ್ ಭರತ್ ರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೇ. 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ 5500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಕರ್ನಾಟಕ ಕಬ್ಬು ಖರೀದಿ ಮತ್ತು ಸರಬ ರಾಜು ಅಧಿನಿಯಮ 2013 ರ ಕಾಯ್ದೆ ರದ್ದುಪಡಿಸಿ ಹಿಂದಿನ ಎಸ್‌ಎಪಿ ನಿಗದಿ ಪಡಿಸಬೇಕು. ರೈತ ವಿರೋಧಿ ಕಬ್ಬು ನಿಯಂತ್ರಣ ತಿದ್ದುಪಡಿ ಕರಡು ಆದೇಶ 2024 ರ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆಯಬೇಕೆಂದರು.
ರಾಜ್ಯ ಸರ್ಕಾರ 2022-23 ನೇ ಸಾಲಿಗೆ ಪ್ರತಿ ಟನ್ ಗೆ 150 ರೂ.ಗಳ ಎಸ್‌ಎಪಿ ನೀಡಲು ಆದೇಶಿಸಿದ್ದು, ಅದರ ಬಾಕಿ ಹಣವನ್ನು ರೈತರಿಗೆ ಶೀಘ್ರವಾಗಿ ನೀಡಬೇಕು. ಹರಿಯಾಣ, ಪಂಜಾಬ್ ಮಾದರಿಯಲ್ಲಿ ಎಫ್ಆರ್‌ಪಿ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಟನ್ ಗೆ 900 ರೂ. ಎಸ್‌ಎಪಿ ನಿಗದಿಪಡಿಸಿದೆ. ಅದೇ ರೀತಿ ನಮ್ಮ ಸರ್ಕಾರವು ಕನಿಷ್ಠ 500 ರೂ. ಎಸ್‌ಎಪಿ ನಿಗದಿಪಡಿಸಬೇಕು. ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ಪಡೆದಿರುವ ಬಾಗಲಕೋಟೆ, ಹಳಿಯಾಳ, ರಾಮದುರ್ಗದ ಇಇಡಿ ಪ್ಯಾರಿ ಶುಗರ್ ಮತ್ತು ಅಫಜಲಪುರದ ರೇಣುಕಾ ಶುಗರ್, ಕೆಪಿಆರ್ ಶುಗರ್ ಕಾರ್ಖಾನೆಗಳಿಂದ ರೈತರಿಗೆ ಹಣವನ್ನು ವಾಪಾಸ್ ಕೊಡಿಸಬೇಕು ಮತ್ತು ಅವುಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇತರೆ ಕಾರ್ಖಾನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದರು.
ಕಬ್ಬು ಬೆಳೆದ 12 ತಿಂಗಳಿಗೆ ಕಟಾವು ಮಾಡಬೇಕು. ಹೆಚ್ಚುವರಿ ತಿಂಗಳು ಗಳಾಗಿ ರೈತರಿಗಾಗುವ ನಷ್ಟವನ್ನು ಕಬ್ಬು ನಿಯಂತ್ರಣ ಆದೇಶ 1966 ಹಾಗೂ 5 ಎ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು. ಈ ಕಾಯ್ದೆಯ ಅನುಸಾರ ಕಬ್ಬು ಬೆಳೆಗಾರರ ಹಕ್ಕುಗಳ ರಕ್ಷಣೆಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಗಳಿಸಿರುವ ಲಾಭದಲ್ಲಿ ಆಧಾಯದ ಪಾಲಿನ ಪ್ರಕಾರ ರೈತರಿಗೆ ಬಾಕು ಹಣ ನೀಡಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ. ಶ್ರೀನಿವಾಸ್, ಆನಂದರಾಜ್, ಭರಮಪ್ಪ ಉಪಸ್ಥಿತರಿದ್ದರು.