ಹರಿಹರ, ಡಿ.8- ರಾತ್ರಿ ಹನ್ನೊಂದು ಮೂವತ್ತಕ್ಕೆ ಗುಡುಗು – ಸಿಡಿಲು ಮಿಂಚಿನಿಂದ ನಿಧಾನವಾಗಿ ಆರಂಭವಾದ ಮಳೆ, ನಂತರ ಆರ್ಭಟಿಸಿ ಸುರಿದಿದ್ದು, ಹಲವಾರು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ. ಇದರಿಂದಾಗಿ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ಮಳೆಯ ನೀರನ್ನು ಹೊರಗಡೆ ಹಾಕುವುದಕ್ಕೆ ಶ್ರಮಪಟ್ಟ ಘಟನೆ ನಡೆದಿದೆ.
ಹರಿಹರ ನಗರ, ಗುತ್ತೂರು, ದೀಟೂರು, ಗಂಗನಹರಸಿ, ಹರ್ಲಾಪುರ, ಸಾರಥಿ, ಕುರಬರಹಳ್ಳಿ, ಕರರ್ಲಹಳ್ಳಿ, ಪಾಮೇನಹಳ್ಳಿ, ಚಿಕ್ಕಬಿದರಿ, ಕೋಡಿಯಾಲ ಹೊಸಪೇಟೆ ಸೇರಿದಂತೆ, ಇತರೆ ಗ್ರಾಮದಲ್ಲಿ ಇಟ್ಟಿಗೆ ಭಟ್ಟಿಯ ಮಾಲೀಕರು ಇಟ್ಟಿಗೆ ತಯಾರಿಸಲು ಕಣವನ್ನು ಸ್ವಚ್ಚತೆ ಮಾಡಿಸಿಕೊಂಡು ಇಟ್ಟಿಗೆ ತಯಾರಿಸಲು ಮುಂದಾಗಿದ್ದರು. ಆದರೆ, ಸುರಿದ ಮಳೆಯಿಂದಾಗಿ ಮತ್ತೆ ಪೂನಃ ಕಣವನ್ನು ಸ್ವಚ್ಚತೆಯನ್ನು ಮಾಡಿಸಿಕೊಳ್ಳುವಂತಾಗಿದೆ. ಇನ್ನೂ ಕೆಲವು ಇಟ್ಟಿಗೆ ಬಟ್ಟೆಯಲ್ಲಿ ಈಗಾಗಲೇ ಸಿದ್ದತೆ ಮಾಡಿದ್ದ ಇಟ್ಟಿಗೆಗಳು ನೀರಿನಲ್ಲಿ ಕರಗಬಲ್ಲ ಸಾಧ್ಯತೆ ಕೂಡ ಇದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸುವಂತಾಗಿದೆ.