ದಾವಣಗೆರೆ, ಡಿ.3- ಬಗರ್ ಹುಕ್ಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಆಗ್ರಹಿಸಿ, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯಿಂದ ಚನ್ನಗಿರಿ ತಾಲ್ಲೂಕಿನಲ್ಲಿ ನಾಳೆ ದಿನಾಂಕ 4ರಿಂದ 6ವರೆಗೆ `ಗ್ರಾಪಂ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಷಣ್ಮುಖನಾಯ್ಕ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ಹಕ್ಕು ಪತ್ರ ನೀಡಲು ಗ್ರಾಮ ಪಂಚಾಯಿತಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುವ `ಗ್ರಾಪಂ ಚಲೋ’ ಕಾರ್ಯಕ್ರಮವನ್ನು ಚನ್ನಗಿರಿ ತಾಲ್ಲೂಕಿನ 16 ಗ್ರಾ.ಪಂ.ಗಳಲ್ಲಿ ನಡೆಸಲಾಗುವುದು ಎಂದರು.
ಬಗರ್‌ಹುಕ್ಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಮುಂದುವರಿದ ಭಾಗವಾಗಿ ಇದೇ ದಿನಾಂಕ 9ರಂದು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
ದಿನಾಂಕ 20ರ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಸಹ ತೀರ್ಮಾನಿಸಲಾಗಿದೆ ಎಂದರು.
ಕಳೆದ ನೂರಾರು ವರ್ಷಗಳಿಂದಲೂ ಜೀವನೋಪಾಯಕ್ಕೆ ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂರಹಿತ ಬಗರ್ ಹುಕ್ಕುಂ ಹಾಗೂ ಅರಣ್ಯ ಅವಲಂಬಿತ ರೈತರಿಗೆ ಕೂಡಲೇ ಸಾಗುವಳಿ ಚೀಟಿ ಹಾಗೂ ಅರಣ್ಯ ಹಕ್ಕಿನ ಮಾನ್ಯತೆ ಪತ್ರ ನೀಡುವಂತೆ,
ಜಿಲ್ಲಾ ಭೂ-ಹಕ್ಕುದಾರರ ವೇದಿಕೆಯ ಸ್ಥಳೀಯ ಶಾಸಕರು, ತಹಶೀಲ್ದಾರರು ಹಾಗೂ ಜಿಲ್ಲಾ ಮಟ್ಟದ ಅರಣ್ಯ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದೆ. ಆದರೂ ಎಲ್ಲೆಡೆ ಈ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರು ಹಾಗೂ ಲೋಕಸಭಾ ಸದಸ್ಯರು ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ಕೊಡಿಸುವುದರ ಮೂಲಕ ಭೂರಹಿತರ ಬಗ್ಗೆ ತಮ್ಮ ಇಚ್ಛಾಶಕ್ತಿ ವ್ಯಕ್ತಪಡಿಸಬೇಕು ಎಂದು ಕೋರಿದರು.
ಬಗರ್‌ಹುಕ್ಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಿಸುವಂತೆ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಸುಮಾರು 39 ಹಳ್ಳಿಗಳ ರೈತರಿಂದ ಸ್ಥಳೀಯ ಶಾಸಕರು, ತಹಶೀಲ್ದಾರರು ಹಾಗೂ ಉಪ ವಿಭಾಗ ಮಟ್ಟದ ಅರಣ್ಯ ಸಮಿತಿಯ ಅಧ್ಯಕ್ಷರಾದ ಉಪ ವಿಭಾಗಾಧಿಕಾರಿಯವರಿಗೆ ಮತ್ತು ಜಿಲ್ಲಾ ಮಟ್ಟದ ಅರಣ್ಯ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ವೇದಿಕೆಯ ರಾಜ್ಯ ಸಂಚಾಲಕ ಕೆ.ಬಿ. ರೂಪಾನಾಯ್ಕ ತಿಳಿಸಿದರು.
ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಯಾವುದೇ ರೈತರನ್ನು ಒಕ್ಕಲೆಬ್ಬಿಸಬಾರದು. ಸಾಗುವಳಿ ಚೀಟಿ ಹಾಗೂ ಅರಣ್ಯ ಹಕ್ಕಿನ ಮಾನ್ಯತೆ ಪತ್ರ ಪಡೆದ ರೈತರ ಹೆಸರು ಪಹಣಿ ಪತ್ರಿಕೆಯಲ್ಲಿ ದಾಖಲಾಗಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ರೈತರಿಗೆ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ವೇದಿಕೆಯ ಪ್ರಮುಖರಾದ ಆರ್. ಮಂಜುನಾಥ್, ಸಾಧಿಕ್ ಸಾಬ್, ದೇವರಾಜ್, ವೆಂಕಟೇಶ್, ಈಶ್ವರಪ್ಪ, ರೇವಣಸಿದ್ದಪ್ಪ ಹಾಗೂ ಸದಸ್ಯರಾದ ಪೀರಾನಾಯ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.