ದಾವಣಗೆರೆ, ಡಿ.3- ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಇಸ್ಕಾನ್‌ನ ಹಿಂದೂ ಸಂತ ಶ್ರೀ ಚಿನ್ಮಯ ಕೃಷ್ಣದಾಸ್ ಅವರ ಬಂಧನ ಖಂಡಿಸಿ, ಬಾಂಗ್ಲಾದಲ್ಲಿ ಹಿಂದೂಗಳ ಸುರಕ್ಷತೆಗಾಗಿ ಒತ್ತಾಯಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಾಳೆ ದಿನಾಂಕ 4ರ ಬುಧವಾರ ನಗರದ ಜಯದೇವ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಇಸ್ಕಾನ್ ದಾವಣಗೆರೆ ಘಟಕದ ಮುಖ್ಯಸ್ಥ ಅವಧೂತ ಚಂದ್ರದಾಸ್ ಗುರೂಜಿ, ನಾಳೆ ಬುಧವಾರ ಬೆಳಿಗ್ಗೆ 10.30ಕ್ಕೆ ಹಿಂದೂ ಸಂಘಟನೆಗಳು, ಸಮುದಾಯದೊಂದಿಗೆ ಪ್ರತಿಭಟನೆ ನಡೆಸಿ, ಗಾಂಧಿ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬಾಂಗ್ಲಾದಲ್ಲಿ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಲಾಗುತ್ತಿದೆ. ಅಲ್ಪಸಂಖ್ಯಾತ ಹಿಂದೂಗಳ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಪ್ರಕೃತಿ ವಿಕೋಪ ಮೊದಲಾದ ಸಮಯದಲ್ಲಿ ಇಸ್ಕಾನ್ ಬಾಂಗ್ಲಾ ನಿವಾಸಿಗಳಿಗೆ ನೆರವು, ಆಶ್ರಯ ನೀಡಿತ್ತು. ಈ ಉಪಕಾರ ಮರೆತು ಅನ್ನ ನೀಡಿದ ಕೈಯನ್ನು ಕತ್ತರಿಸಲು ಹೊರಟಿದ್ದಾರೆ. ಇದರಿಂದ ಆ ದೇಶಕ್ಕೆ ಒಳ್ಳೆಯದಾಗುವುದಿಲ್ಲ ಎಂದರು.
ಹಿಂದೂ ಸಂಘಟನೆಯ ಮುಖಂಡ ಎಸ್.ಟಿ. ವೀರೇಶ್ ಮಾತನಾಡಿ, ಬಾಂಗ್ಲಾದಲ್ಲಿ ಹೊಸ ಸರ್ಕಾರ ಬಂದ ನಂತರ ಮುಸ್ಲಿಂ ಮೂಲಭೂತವಾದಿಗಳಿಂದ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಶೀಘ್ರವೇ ಅಲ್ಲಿನ ದೌರ್ಜನ್ಯಗಳ ತಡೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಹಿಂದೂ ಹಿತರಕ್ಷಣಾ ಸಮಿತಿಯ ಸತೀಶ್ ಪೂಜಾರಿ ಮಾತನಾಡಿ, ವಲಸೆ ಬಾಂಗ್ಲಾ ನಿವಾಸಿಗಳನ್ನು ದೇಶದಿಂದ ಹೊರ ಹಾಕುವ ಮೂಲಕ ಬಾಂಗ್ಲಾಕ್ಕೆ ಭಾರತ ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ಧಲಿಂಗ ಸ್ವಾಮಿ, ಟಿ.ಆರ್. ಕೃಷ್ಣಪ್ಪ, ರಾಜು, ಬಸವರಾಜ್ ಉಚ್ಚಂಗಿದುರ್ಗ, ರಾಜನಹಳ್ಳಿ ಶಿವಕುಮಾರ್, ಹೆಚ್.ಪಿ. ವಿಶ್ವಾಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.