ಪೊಲೀಸ್ ಕ್ರೀಡಾಕೂಟದ ಸಮಾರೋಪದಲ್ಲಿ ಪೂರ್ವ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಬಿ. ರಮೇಶ್ ಕರೆ
ದಾವಣಗೆರೆ, ಡಿ. 2- ಪೊಲೀಸ್ ಸಿಬ್ಬಂದಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಪೂರ್ವ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಬಿ. ರಮೇಶ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನ ದಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಅವರು ಮಾತನಾಡಿದರು.
ಆರೋಗ್ಯವೇ ಭಾಗ್ಯ, ಸಿಬ್ಬಂದಿ ದೈಹಿಕ ಆರೋಗ್ಯ ಇಲ್ಲವಾದಲ್ಲಿ ಅವರ ಕುಟುಂಬ ಬೀದಿ ಪಾಲಾಗಲಿದೆ. ಹಾಗಾಗಿ ಎಚ್ಚರಿಕೆ ವಹಿಸಬೇಕು. ಮಹಿಳಾ ಸಿಬ್ಬಂದಿ ಕೂಡಾ ಮಕ್ಕಳಾದ ನಂತರದಲ್ಲಿ ಶಾರೀರಿಕ ಸ್ವಾಸ್ಥ್ಯಕ್ಕೆ ಒತ್ತು ನೀಡಬೇಕು. ಕುಟುಂಬದ ಜೊತೆ ಸಮಯ ಮೀಸಲಿಡಿ ಎಂದು ಹೇಳಿದರು.
ಯಾವುದೇ ಇಲಾಖೆಯೂ ಮಾಡದ ಕೆಲಸವನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ. ಕೊಳೆತ ಶವದ ಬಳಿ ಹೋಗಿ ತನಿಖೆ ಮಾಡುವುದರಿಂದ ಹಿಡಿದ ಸಾರ್ವಜನಿಕರು ಹೋಗಲಾಗದ ಸ್ಥಳಕ್ಕೂ ಹೋಗಿ ಅಧಿಕಾರಿ – ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಪೇದೆ, ಮುಖ್ಯಪೇದೆ ಹಾಗೂ ಎಎಸ್ಐಗಳು ಇಲಾಖೆಯ ಆಧಾರ ಸ್ತಂಭಗಳು. ಮನೆ-ಕಛೇರಿ ಒತ್ತಡದ ನಡುವೆಯೂ ವಹಿಸಿದ ಜವಾಬ್ದಾರಿಯನ್ನು ನಿರಾಕರಿಸದೇ ಹಗಲು, ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ ಎಂದರು.
ನಗರದಲ್ಲಿನ ಗಣೇಶೋತ್ಸವದ ಸಂದರ್ಭದಲ್ಲಿ 10 ದಿನಗಳ ಕಾಲ ಅಧಿಕಾರಿ, ಸಿಬ್ಬಂದಿ ಮನೆಗೆ ತೆರಳದೇ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಬಂದೋಬಸ್ತ್ ಮಾಡಿ ಜಿಲ್ಲೆಗೆ ಹೆಸರು ತಂದಿದ್ದೀರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗ ಳಾದ ವಿಜಯಕುಮಾರ್, ಎಂ. ಸಂತೋಷ, ಜಿ. ಮಂಜುನಾಥ ಇದ್ದರು. ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ದಾವಣಗೆರೆ ನಗರ ಉಪವಿಭಾಗ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಇದೇ ಉಪ ವಿಭಾಗದ ಮಾಲತಿಬಾಯಿ ಹಾಗೂ ಅಜ್ಜೋಳ ಉಮೇಶ್ ಕ್ರಮವಾಗಿ ಮಹಿಳಾ ಹಾಗೂ ಪುರುಷರ ವಿಭಾಗದ ಚಾಂಪಿಯನ್ನಗಳಾಗಿ ಹೊರ ಹೊಮ್ಮಿದರು.