ಕೊಲೆ : ಅಪರಾಧಿಗೆ 6 ವರ್ಷ ಶಿಕ್ಷೆ

ದಾವಣಗೆರೆ, ಡಿ.1- ಕೆಲಸದ ವಿಚಾರಕ್ಕೆ ಜೊತೆಗಾರನನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರು ದೊಡ್ಡ ಬೆಟ್ಟಹಳ್ಳಿಯ ಹನುಮಂತಪ್ಪ (60) ಶಿಕ್ಷೆಗೆ ಗುರಿಯಾದ ಅಪರಾಧಿ. ಬಾಬು (ಬಾಷಾ) ಕೊಲೆಯಾದವರು.

ಬಾಬು ಹಾಗೂ ಹನುಮಂತಪ್ಪ ಹೊನ್ನಾಳಿಗೆ ಗಾರೆ ಕೆಲಸಕ್ಕೆ ಬಂದಿದ್ದರು. ಬಾಬು ಅವರು ಹನುಮಂತಪ್ಪ ಅವರನ್ನು ಗಾರೆ ಕೆಲಸದ ವಿಚಾರವಾಗಿ ಆಗಾಗ ನಿಂದಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು 2022ರ ಡಿಸೆಂಬರ್ 10ರಂದು ಹನುಮಂತಪ್ಪ ಬಾಬು ಅವರಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ.

ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಹೊನ್ನಾಳಿ ಪೊಲೀಸ್‌ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಸಿದ್ದೇಗೌಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣಕುಮಾ‌ರ್ ಆ‌ರ್.ಎನ್. ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಜಿ. ಜಯಪ್ಪ ಅವರು ವಾದ ಮಂಡಿಸಿದ್ದರು.

error: Content is protected !!