ವಕ್ಫ್‌ ಸಮಸ್ಯೆ ಪರಿಹಾರಕ್ಕಾಗಿ ಇಂದು ‘ನಮ್ಮ ಭೂಮಿ-ನಮ್ಮ ಹಕ್ಕು’ ಆಂದೋಲನ

ದಾವಣಗೆರೆ, ನ.21- ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ  ನಾಳೆ ದಿನಾಂಕ 22ರ ಶುಕ್ರವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ನಮ್ಮ ಭೂಮಿ- ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಎಂ.ಸತೀಶ್ ಕೊಳೇನಹಳ್ಳಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಂದೋಲನದ ಜೊತೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ವಕ್ಫ್ ಬಾಧಿತ ಜನರ ಸಮಸ್ಯೆ ಆಲಿಸಲು ಮೂರು ತಂಡಗಳನ್ನು ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆ, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ವಕ್ಫ್ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ನಾಳೆ ದಿನಾಂಕ 22ರ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಶೋಷಣೆಗೆ ಒಳಗಾದ ಜನರನ್ನು ಬರಮಾಡಿಕೊಂಡು ಅಹವಾಲು ಸ್ವೀಕರಿಸುತ್ತೇವೆ. ಈ ಮೂಲಕ ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡುತ್ತೇವೆ ಎಂದರು.

ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಎದುರಾಗಿರುವ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಓರ್ವ ವಕೀಲರನ್ನು ಒಳಗೊಂಡ 5 ಜನರ ತಂಡ ರಚಿಸಲಾಗಿದೆ. ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ ಈ ತಂಡ ರಚಿಸಿದ್ದು, ಪ್ರತಿ ಜಿಲ್ಲೆಯಲ್ಲಿ ಮಠಾಧೀಶರೂ ಸೇರಿದಂತೆ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರನ್ನೂ ಭೇಟಿ ಮಾಡುವ ಮೂಲಕ ಜನಜಾಗೃತಿ ಮೂಡಿಸು ತ್ತಿದ್ದೇವೆ. ಆಯಾ ಜಿಲ್ಲೆಗೆ ನಿಗದಿಪಡಿಸಿದ ದಿನಾಂಕದಂದು ಹೋರಾಟದಲ್ಲಿ ಪಕ್ಷದ ನಾಯಕರು, ಮಠಾಧೀಶರು, ರೈತ ಮುಖಂಡರು, ಸೆಲೆಬ್ರಿಟಿಗಳು, ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ರೈತರು ಹಾಗೂ ಸಾರ್ವಜನಿಕರು ತಪ್ಪದೇ ತಮ್ಮ ಜಾಗದ ಪಹಣಿಯನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. ನ.28ರಂದು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡವು ದಾವಣಗೆರೆ ಜಿಲ್ಲೆಗೆ ಆಗಮಿಸಲಿದೆ. ರೈತರು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದೆ. ಎಲ್ಲ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೈಜ ವರದಿಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

ಕೇಂದ್ರದ ಮೂವರು ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖ ನಾಯಕರು ಇರುವ ಪ್ರತಿ ತಂಡವು ಕನಿಷ್ಠ 8-10 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸದನದಲ್ಲಿ ವಾಸ್ತವಿಕ ಸಮಸ್ಯೆಗಳ ಕಡೆ ಬೆಳಕು ಚೆಲ್ಲಲಿದೆ. ಆನಂತರ 50-60 ಸಾವಿರ ಸಾರ್ವಜನಿಕರು, ರೈತರನ್ನು ಸೇರಿಸಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನದ ವೇಳೆ ಬೃಹತ್ ಪ್ರತಿಭಟನೆ ಆಯೋಜಿಸುತ್ತೇವೆ ಎಂದು ಅವರು ವಿವರಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ವಕ್ಷ್ ಮಂಡಳಿ ನೀಡಿದ ನೋಟಿಸ್ ರದ್ದು ಮಾಡುತ್ತೇವೆ ಎಂಬ ಕಾಂಗ್ರೆಸ್ಸಿಗರ ಬಾಯಿಮಾತಿನ ಸಾಂತ್ವನದಿಂದ ಪ್ರಯೋಜನವಿಲ್ಲ. ಜನರಿಗೆ ಆಸ್ತಿ ಪರಭಾರೆ, ಮಾರಾಟ ಮಾಡುವಾಗ, ಬ್ಯಾಂಕ್ ಸಾಲ ಬೇಕಾದಾಗ ಏನು ಮಾಡಬೇಕು? ಜನರ ಕಷ್ಟಕ್ಕೆ ಕಾಂಗ್ರೆಸ್ಸಿಗರು, ಅಧಿಕಾರಿಗಳು ನೆರವಿಗೆ ಬರುವುದಿಲ್ಲ ಆದ್ದರಿಂದ ಸಚಿವ ಸಂಪುಟದಲ್ಲಿ ತೀರ್ಮಾನವಾಗಬೇಕು ಎಂದರು.

ಮುಖಂಡ ಬಿ.ಜೆ.ಅಜಯ್ ಕುಮಾರ್ ಮಾತನಾಡಿ, ಅಧಿಕಾರಿಗಳ ಕಣ್ತಪ್ಪಿನಿಂದ ಪಿ.ಜೆ ಬಡಾವಣೆಯ ಆಸ್ತಿ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಾಗಿದ್ದು, ಇನ್ನು 2-3 ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂಬ ತಹಶೀಲ್ದಾರ್ ಭರವಸೆ ಇನ್ನೂ ಈಡೇರಿಲ್ಲ. ಜನರಿಗೆ ಕಾನೂನುಬದ್ಧವಾಗಿ ನ್ಯಾಯ ಕೊಡಿಸಲು ನಾವು ಬದ್ಧರಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಾಯ್ಕ, ಮುಖಂಡರಾದ ಕೊಟ್ರೇಶ ಗೌಡ, ಹೆಚ್.ಪಿ.ವಿಶ್ವಾಸ್, ಹೆಚ್.ಬಿ.ನವೀನ ಕುಮಾರ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!