ದಾವಣಗೆರೆ, ನ. 19- ಸಹಕಾರ ಭಾರತಿ ವತಿಯಿಂದ ಇದೇ ದಿನಾಂಕ 22 ರಂದು ಬೆಳಿಗ್ಗೆ 11 ಕ್ಕೆ ನಗರದ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಸಮುದಾಯ ಭವನದಲ್ಲಿ ರಾಜ್ಯ ಸಹಕಾರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಭಾರತಿಯ ಕಾರ್ಯಾಧ್ಯಕ್ಷ ಎಂ.ಆರ್. ಪ್ರಭುದೇವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನದ ಶ್ರೀ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ದೀನನಾಥ್ ಠಾಕೂರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ್, ಸಹಕಾರಿ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಉದಯ ವಾಸುದೇವ್ ಜೋಶಿ, ಅಧ್ಯಕ್ಷ ಜಿ. ನಂಜನಗೌಡ ಭಾಗವಹಿಸಲಿದ್ದಾರೆ. ರಾಜ್ಯಾ ಧ್ಯಕ್ಷರೂ, ಮಾಜಿ ಶಾಸಕರಾದ ರಾಜಶೇಖರ್ ಶೀಲವಂತ್ ಅಧ್ಯಕ್ಷತೆ ವಹಿಸುವರು.
ಉದ್ಘಾಟನೆಗೂ ಮುನ್ನ ಅಂದು ಬೆಳಿಗ್ಗೆ 9 ಕ್ಕೆ ಸಹಕಾರಿ ಧ್ವಜಾರೋಹಣವನ್ನು ರಾಷ್ಟ್ರೀಯ ಸಂರಕ್ಷಕ್ ರಮೇಶ್ ವೈದ್ಯ ನೆರವೇರಿಸಲಿದ್ದಾರೆ. ಬೆಳಿಗ್ಗೆ 10 ಕ್ಕೆ `ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಯುವಕರ ಪಾತ್ರ’ ಕುರಿತು ಬೆಂಗಳೂರಿನ ಎಸ್. ಸೌಮ್ಯ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 12.30 ಕ್ಕೆ `ಪಂಚ ಪರಿವರ್ತನೆ’ ಕುರಿತು ಆರ್‌ಎಸ್‌ಎಸ್ ಪ್ರಕಾಶ್ ಜೀ ವಿಷಯ ಮಂಡಿಸಲಿ ದ್ದಾರೆ. ಮಧ್ಯಾಹ್ನ 3 ಕ್ಕೆ `ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿ ಜವಾಬ್ದಾರಿ’ ಕುರಿತು ಸಿದ್ಧರಾಮ್ ಮೆಲೆಪ್ಪ ಕಲ್ಲೋತಿ ವಿಷಯ ಮಂಡಿಸುವರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯ ದರ್ಶಿ ಸಂಜಯ್ ಪಾಚಪೂರ ಸಮಾರೋಪ ನುಡಿಗಳನ್ನಾಡಲಿ ದ್ದಾರೆ. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ರವಿ, ಜಿಲ್ಲಾಧ್ಯಕ್ಷ ಜಿ.ಎನ್. ಸ್ವಾಮಿ, ಮುರುಗೇಶ್, ಬಿ. ಶೇಖರಪ್ಪ, ಎಸ್.ಟಿ. ವೀರೇಶ್, ಪರಶುರಾಮಪ್ಪ, ಪ್ರಮೋದ್, ಚನ್ನಬಸಪ್ಪ ಉಪಸ್ಥಿತರಿದ್ದರು.