ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ
ದಾವಣಗೆರೆ, ನ.19- ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ಆಫರ್ ನೀಡಿದವರು ಯಾರು ? ಎಂಬುದನ್ನು ಅವರ ಹೆಸರಿನ ಸಮೇತ ಶಾಸಕ ರವಿ ಗಾಣಿಗ ಅವರು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮೇಲೆ ಮಾಡಿರುವ ಆರೋಪವನ್ನು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ಹೆಚ್.ಡಿ. ತಮ್ಮಯ್ಯ, ಬಾಬಾ ಸಾಹೇಬ್ ಪಾಟೀಲ್ ಒಪ್ಪಿಕೊಂಡಿಲ್ಲ. ನಮಗೆ ಅಂತಹ ಯಾವುದೇ ಆಫರ್ ಬಂದಿಲ್ಲ ಎಂದು ಅವರದೇ ಪಕ್ಷದ ಶಾಸಕರು ಹೇಳಿರುವಾಗ ರವಿ ಗಾಣಿಗ ಆರೋಪ ಕೇವಲ ಪ್ರಚಾರಕ್ಕೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹಿಂದೆಯೂ 50 ಕೋಟಿ ರೂ. ಆಫರ್ ನೀಡಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದವರು ಇದುವರೆಗೂ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯ ಯಾವುದೇ ಶಾಸಕರು ಸಂಪರ್ಕಿಸಿದ್ದರೆ ರಾಜ್ಯದ ಜನತೆಯ ಮುಂದೆ ಮೊದಲು ದಾಖಲೆ ಸಮೇತ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.ಸಾವಿರಾರು ಕೋಟಿ ರೂ. ಎಂದ ಮೇಲೆ ಇದು ಇಡಿ ವ್ಯಾಪ್ತಿಗೆ ಬರುತ್ತದೆ. ಸರ್ಕಾರ ಕೂಡಲೇ ಎಸ್‌ಐಟಿ ಇಲ್ಲವೇ ಇಡಿಯಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಜಾಧವ್, ಧರ್ಮರಾಜ್, ರಾಜು ವೀರಣ್ಣ, ಸುಮಂತ್, ಮಂಜುನಾಥ್, ಪ್ರಶಾಂತ್ ಉಪಸ್ಥಿತರಿದ್ದರು.