ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಧಾನ್ಯಾಗಾರದಿಂದ ಪೆಟ್ರೋಲ್ ಪಂಪ್‌ಗಳವರೆಗೆ ಅವಕಾಶ : ಕೆ. ಮಹೇಶ್ವರಪ್ಪ
ದಾವಣಗೆರೆ, ನ. 14 – ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಐದು ಉಪಕ್ರಮಗಳನ್ನು ರೂಪಿಸಿದ್ದು, ತಂತ್ರಾಂಶದಿಂದ ಹಿಡಿದು ಪೆಟ್ರೋಲ್ ಪಂಪ್ ಸ್ಥಾಪನೆವರೆಗೆ ಹಲವು ವಿಷಯಗಳಲ್ಲಿ ನೆರವು ನೀಡುತ್ತಿದೆ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಕೆ. ಮಹೇಶ್ವರಪ್ಪ ತಿಳಿಸಿದರು.
ನಗರದ ಹಿರೇಮಠದಲ್ಲಿ ಆಯೋಜಿಸಲಾಗಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ವಿಷಯ ತಜ್ಞರಾಗಿ ಅವರು ಉಪನ್ಯಾಸ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳಿಗೆ ಕೇಂದ್ರ ಸರ್ಕಾರ ಮಾದರಿ ಬೈಲಾಗಳನ್ನು ರೂಪಿಸಿದೆ. ಇದರಿಂದಾಗಿ ಸಹಕಾರ ಸಂಘಗಳು ಆರ್ಥಿಕವಾಗಿ ಪಾರದರ್ಶಕ ಹಾಗೂ ಶಕ್ತಿಯುತವಾಗಲಿವೆ. ಇದೇ ವೇಳೆ ದೇಶಾದ್ಯಂತ ಇರುವ ಪ್ಯಾಕ್ಸ್‌ಗಳಿಗೆ ಒಂದೇ ರೀತಿಯ ತಂತ್ರಾಂಶ ಅಳವಡಿಕೆ ಮಾಡಲಾಗುತ್ತಿದೆ. 2,516 ಕೋಟಿ ರೂ. ವೆಚ್ಚದಲ್ಲಿ 67 ಸಾವಿರಕ್ಕೂ ಹೆಚ್ಚು ಪ್ಯಾಕ್ಸ್‌ಗಳು ಒಂದೇ ರೀತಿಯ ಸಾಫ್ಟ್‌ವೇರ್ ಹೊಂದಲಿವೆ. ಇದು ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಮಹೇಶ್ವರಪ್ಪ ತಿಳಿಸಿದರು.
ಪ್ಯಾಕ್ಸ್‌ಗಳು ಧಾನ್ಯ ಸಂಗ್ರಹಗಾರ ಸ್ಥಾಪಿಸಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಪತ್ತಿನ ಸಹಕಾರ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವ ಹಿಸುವ ಮೂಲಕ ಜನರಿಗೆ ಅಗತ್ಯ ಸೇವೆಗಳನ್ನು ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಹೇಶ್ವರಪ್ಪ ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೃಷಿ ಉತ್ಪಾದಕರ ಸಂಘಟನೆಗಳನ್ನೂ ಸಹ ತೆರೆಯಲಾಗುವುದು. ಪತ್ತಿನ ಸಹಕಾರ ಸಂಘಗಳು ಸ್ವಂತ ಜಾಗ ಹೊಂದಿದ್ದಲ್ಲಿ ಪೆಟ್ರೋಲ್ ಪಂಪ್ ಹಾಗೂ ಅಡುಗೆ ವಿತರಣೆ ಕೇಂದ್ರಗಳನ್ನು ಹೊಂದಲೂ ಸಹ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ ಎಂದವರು ಹೇಳಿದರು.
ಇದೆಲ್ಲದರ ಜೊತೆಗೆ, ಇನ್ನೂ 16 ಉಪಕ್ರಮಗಳ ಮೂಲಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೆರವು ನೀಡುತ್ತಿದೆ. ಜನೌಷಧಿ ಕೇಂದ್ರ, ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ, ಬ್ಯಾಂಕ್ ಮಿತ್ರ ಕೇಂದ್ರ ಇತ್ಯಾದಿಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸೌರ ವಿದ್ಯುತ್ ನೀರಿನ ಪಂಪ್ ಸೌಲಭ್ಯ ಕಲ್ಪಿಸುವ ಪಿಎಂ – ಕುಸುಮ್ ಯೋಜನೆ ಜಾರಿಗೆ ತರಲೂ ಅವಕಾಶವಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 184 ಕೃಷಿ ಪತ್ತಿನ ಸಹಕಾರ ಸಂಘಗಳು ಈಗ ಸಕ್ರಿಯವಾಗಿದ್ದು, ಗ್ರಾಮೀಣರಿಗೆ ಸಾಕಷ್ಟು ಸೇವೆಗಳನ್ನು ಕಲ್ಪಿಸುತ್ತಿವೆ ಎಂದು ಮಹೇಶ್ವರಪ್ಪ ತಿಳಿಸಿದರು.
ಕೇಂದ್ರ ಸರ್ಕಾರ ನಗರ ಸಹಕಾರ ಬ್ಯಾಂಕ್ ಗಳ ಬಲವರ್ಧನೆಗೂ ಕ್ರಮಗಳನ್ನು ತೆಗೆದುಕೊ ಳ್ಳುತ್ತಿದೆ. ನಗರ ಸಹಕಾರ ಬ್ಯಾಂಕ್‌ಗಳು ಷೆಡ್ಯೂಲ್ ಬ್ಯಾಂಕುಗಳಾಗಲು ಉತ್ತೇಜನ ನೀಡಲಾಗುತ್ತಿದೆ. ನಗರ ಬ್ಯಾಂಕ್‌ಗಳು ಒಕ್ಕೂಟ ರಚಿಸಿಕೊಂಡು ಬಲವರ್ಧನೆಯಾಗಲು ಅವಕಾಶವಿದೆ. ಅಲ್ಲದೇ, ನಗರ ಬ್ಯಾಂಕ್‌ಗಳ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಮಾಡಲೂ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.