ದಾವಣಗೆರೆ, ನ.11- ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆ ದಿನಾಂಕ 12ರಿಂದ 14ರ ವರೆಗೆ 2024-25ನೇ ಸಾಲಿನ ಪದವಿ ಪೂರ್ವ ಕಾಲೇಜು ಗಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ನಡೆಯ ಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ರಾಘವೇಂದ್ರ ಹೈ-ಟೆಕ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ಜರುಗಲಿದೆ ಎಂದು ಹೇಳಿದರು.
ನಾಳೆ ಮಂಗಳವಾರ ಸಂಜೆ 5ಕ್ಕೆ ಕ್ರೀಡಾ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕ್ರೀಡಾ ಜ್ಯೋತಿ ಸ್ವೀಕಾರ ಮಾಡಲಿದ್ದಾರೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಶಾಸಕರಾದ ಕೆ.ಎಸ್. ಬಸವಂತಪ್ಪ, ಬಸವರಾಜು ವಿ. ಶಿವಗಂಗಾ, ಬಿ.ಪಿ. ಹರೀಶ್, ಡಿ.ಜಿ. ಶಾಂತನಗೌಡ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
13ರಿಂದ 14ರ ವರೆಗೆ ಹೊನಲು ಬೆಳಕಿನ ಕರಾಟೆ ಪಂದ್ಯಾವಳಿ ನಡೆಯಲಿದ್ದು, ಪ್ರತಿ ಜಿಲ್ಲೆಗಳಿಂದ ಬಾಲಕರು ಹಾಗೂ ಬಾಲಕಿಯರ ತಂಡಗಳು ಆಗಮಿಸಲಿದ್ದು, ಒಟ್ಟು 793 ಕ್ರೀಡಾಪಟುಗಳು ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್, ರಾಘವೇಂದ್ರ ಹೈ-ಟೆಕ್ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ, ದೈ.ಶಿ.ವಿಭಾಗದ ಜಿಲ್ಲಾ ಕ್ರೀಡಾ ಸಂಯೋಜಕ ಎಂ. ಗಣೇಶ್, ಉಪನ್ಯಾಸಕರಾದ ನಾಗರಾಜ್, ರಾಘವೇಂದ್ರ ಇದ್ದರು.