ದಾವಣಗೆರೆ, ನ. 8- ಇಲ್ಲಿನ ವಿನೋಬನಗರದ 1 ನೇ ಮುಖ್ಯ ರಸ್ತೆ ನಡೆಯುತ್ತಿರುವ ಚರಂಡಿ ಕಾಮಗಾರಿ ಕಳಪೆ, ಅವೈಜ್ಞಾನಿಕ ಮತ್ತು ಮಂದಗತಿಯಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಆಯುಕ್ತರು ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಿದ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಹೆಚ್. ದಿವಾಕರ್ ಮನವಿ ಮಾಡಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಿದ್ದು, ಇದರಿಂದಾಗಿ ತಗ್ಗು ಪ್ರದೇಶದಲ್ಲಿನ ಜನರಿಗೆ ಮಳೆ ನೀರು ನುಗ್ಗಬಾರದು ಎಂದು ಮಾಡುತ್ತಿದ್ದು, ಇದನ್ನು 15,16 ನೇ ಕ್ರಾಸ್‌ನಿಂದ ಪ್ರಾರಂಭ ಮಾಡದೇ ಪಿ.ಬಿ. ರಸ್ತೆಯ ಕಡೆಯಿಂದ ಪ್ರಾರಂಭ ಮಾಡಿರುವುದು ಅವೈಜ್ಞಾನಿಕವಾಗಿರುತ್ತದೆ ಎಂದು ದೂರಿದ್ದಾರೆ.
16 ನೇ ಕ್ರಾಸ್ ಇಳಿಜಾರಿನಿಂದ ಪಿ.ಬಿ. ರಸ್ತೆಯ ಕಡೆಗೆ ನೀರು ಹರಿದು ಹೋಗಬೇಕಾಗಿರುತ್ತದೆ. ಹಾಗೆ ಮಾಡಿದ್ದರೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್‌ಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈಗ್ಗೆ ಮೂರು ತಿಂಗಳಿನಿಂದ ಎಲ್ಲಾ ಅಡ್ಡ ರಸ್ತೆಗಳ ಸಂಪರ್ಕ ಕಡಿತ ಮಾಡಿ ಅಲ್ಲಿನ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುವಂತೆ ಮಾಡಿದ್ದಾರೆ.
ಚರಂಡಿಗಳಲ್ಲಿ ಸಾಕಷ್ಟು ಜನ ಬಿದ್ದು ತೊಂದರೆ ಅನುಭವಿಸಿದ್ದಾರೆ. ಅಲ್ಲದೇ ರಸ್ತೆ ತುಂಬೆಲ್ಲಾ ಜಲ್ಲಿ ಕಲ್ಲುಗಳು ಹರಡಿದ್ದು, ಅದನ್ನು ಸರಿ ಮಾಡುವ ಕೆಲಸ ಕೂಡ ಆಗಿಲ್ಲ. ಆ ಜಲ್ಲಿ ಕಲ್ಲುಗಳ ಮೇಲೆ ವಾಹನಗಳು ಓಡಾದಿದಾಗ, ಅವು ಮನೆಯ ಕಿಟಕಿ, ಬಾಗಿಲು, ವಾಹನಗಳಿಗೆ ಸಿಡಿಯುತ್ತಿರುತ್ತವೆ. ಇವೆಲ್ಲಾ ಸಮಸ್ಯೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ಹೇಳಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಕೂಡಲೇ ಕಾಮಗಾರಿ ಗುಣಮಟ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆಯುಕ್ತರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ದಿವಾಕರ್ ಕೋರಿದ್ದಾರೆ.