ಕಾಮಗಾರಿ ಮಾಡದೇ ಬಿಲ್‌ ಪಡೆದ ಆರೋಪ ಲೋಕಾಯುಕ್ತ ಎಂಜಿನಿಯರ್‌ ಪರಿಶೀಲನೆ

ಹರಿಹರ, ನ.7- ಕಾಮಗಾರಿ ನಡೆಸದೇ ಬಿಲ್‌ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿನ ಆಧಾರದ ಮೇರೆಗೆ ಬೆಂಗಳೂರಿನ ಲೋಕಾಯುಕ್ತ ಸಿವಿಲ್ ಎಂಜಿನಿಯರ್‌ ಅನುಷಾ ಮತ್ತು ಸಿಬ್ಬಂದಿ ನಗರದ ಕೆ.ಆರ್‌. ನಗರದಲ್ಲಿ  ನಿನ್ನೆ ಪರಿಶೀಲನೆ ನಡೆಸಿದರು.

ಮೊದಲು ನಗರಸಭೆ ಕಛೇರಿಗೆ ಭೇಟಿ ನೀಡಿದ್ದ ತಂಡವು, ದಾಖಲಾಗಿರುವ ದೂರಿನ ಸಂಬಂಧಿತ ಕಡತಗಳನ್ನು ವಶಕ್ಕೆ ಪಡೆಯಿತು. ನಂತರ ಕೆ.ಆರ್‌. ನಗರದ ವಿದ್ಯಾದಾಯಿನಿ ಶಾಲೆ ಸುತ್ತಲಿನ ಕಿರು ನೀರು ಸರಬರಾಜು ಕೇಂದ್ರಗಳನ್ನು ಪರಿಶೀಲಿಸಿತು.

ಆರೋಪ ಹೊತ್ತವರ ಪೈಕಿ ನಗರಸಭೆ ಹಿಂದಿನ ಪೌರಾಯುಕ್ತರಾದ ಎಸ್‌. ಲಕ್ಷ್ಮಿ ಅವರು ಮಾತ್ರ ಸ್ಥಳಕ್ಕೆ ಆಗಮಿಸಿ, ಪರಿಶೀಲನಾ ಸಮಯದಲ್ಲಿ ಹಾಜರಿರಲು ಆಗುತ್ತಿಲ್ಲ ಎಂಬ ಪತ್ರವನ್ನು ನೀಡಿ ತೆರಳಿದರು. 

ಈ ಹಿಂದೆ ಇಲ್ಲಿ ಎಇಇ, ಎಇ ಯಾಗಿ ಸೇವೆ ಸಲ್ಲಿಸಿದ್ದ ಆರೋಪಿತರು ಸ್ಥಳ ಪರಿಶೀಲನಾ ಸಮಯದಲ್ಲಿ ಬರುತ್ತೇವೆ ಎಂದು ಹೇಳಿದ್ದರಾದರೂ ಹಾಜರಾಗಲಿಲ್ಲ. ಇನ್ನೆರಡು ದಿನ ಪರಿಶೀಲನೆ
ನಡೆಯಲಿದ್ದು, ಆರೋಪಿತರು ಆಗಮಿಸುವ ನಿರೀಕ್ಷೆಯಿದೆ. ಬಾರದಿದ್ದಲ್ಲಿ
ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅನುಷಾ ಪ್ರತಿಕ್ರಿಯಿಸಿದರು.

ದೂರುದಾರರಾದ ಗುತ್ತಿಗೆದಾರ ಮಜಹರ್‌ ಸಾಬ್‌, ಮಧುಸೂದನ ಮೂಡಿ, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಎಂಜಿನಿಯರ್‌ ಪ್ರಕಾಶ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜೆ. ಮಹಾಂತೇಶ್‌ ಇದ್ದರು.

error: Content is protected !!