ದಾವಣಗೆರೆ, ನ. 6- ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಆರ್‌ಡಿಎಂ)ಪ್ರಥಮ ರಾಜ್ಯ ಸಮ್ಮೇಳನ ನಾಳೆ ದಿನಾಂಕ 8 ಮತ್ತು 9 ರಂದು ದಾವಣಗೆರೆಯಲ್ಲಿ ನಡೆಯಲಿದೆ ಎಂದು ಎಐಡಿಆರ್ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಮಹೇಶ್ ಕುಮಾರ್ ರಾಠೋಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಮತ್ತು ನಗರದ ಸಾರ್ವಜನಿಕ ಆಸ್ತಿ ದಲಿತರಿಗೆ ಸಮಾನವಾಗಿ ದೊರೆಯುವಂತೆ ಅಗತ್ಯ ಕಾಯ್ದೆಯನ್ನು ರಚಿಸಿ, ಕಟ್ಟುನಿಟ್ಟಾಗಿ ಜಾರಿಗೆ ತರುವುದು ಒಳಗೊಂಡಂತೆ, ಒಟ್ಟು 15 ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಮಹಿಳೆಯರ ಆರೋಗ್ಯ ಮತ್ತು ರಕ್ಷಣೆ ಖಚಿತಪಡಿಸಲು ಅವರ ಹಕ್ಕುಗಳಿಗೆ ರಕ್ಷಣೆ ಮತ್ತು ಜೀವನ ಕ್ರಮವನ್ನು ಸಮಾನವಾಗಿಸುವ ಬಗ್ಗೆ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವದು. 1976 ರ ಜೀತ ಪದ್ಧತಿ ನಿರ್ಮೂಲನಾ ಜಾರಿ ಕಾಯ್ದೆ, ಬಾಲದುಡಿಮೆ ಪದ್ಧತಿ ರದ್ಧತಿ, ನೂತನ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದು ಒಳಗೊಂಡಂತೆ ಹಲವಾರು ವಿಷಯಗಳ ಬಗ್ಗೆ ರಚನಾತ್ಮಕವಾಗಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಆವರಗೆರೆ ವಾಸು ಮಾತನಾಡಿ, ನಾಡಿದ್ದು ದಿನಾಂಕ 8 ರಂದು ನಗರದ ಜಯದೇವ ವೃತ್ತ ಸಮೀಪದ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಹಿರಂಗ ಸಭೆಗೂ ಮುನ್ನ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಲಾಗುವುದು. 9 ರಂದು ಹರಿಹರದ ಬೈಪಾಸ್ ರಸ್ತೆಯಲ್ಲಿನ ಮೈತ್ರಿ ವನದಲ್ಲಿ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಲಾದ ಆವರಗೆರೆ ಪಿ.ಬಿ. ಚಂದ್ರು, ಟಿ.ಎಸ್.ನಾಗರಾಜ್, ಎಂ.ಬಿ. ಶಾರದಮ್ಮ, ಗುರುಮೂರ್ತಿ, ಎಸ್. ಚಂದ್ರಪ್ಪ, ಹನುಮಂತಪ್ಪ, ಪಿ.ಷಣ್ಮುಖ ಸ್ವಾಮಿ, ರಾಜು ಕೆರೆಯಾಗಳಹಳ್ಳಿ, ನರೇಗಾ ರಂಗನಾಥ, ವಿ. ಲಕ್ಷ್ಮಣ್ ಉಪಸ್ಥಿತರಿದ್ದರು.