ದಾವಣಗೆರೆ, ನ.3- ಪ್ರೀತಿ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.
ರಾಣೇಬೆನ್ನೂರಿನ ವಿನಾಯಕ ನಗರದ 4ನೇ ಕ್ರಾಸಿನ ನಿವಾಸಿ ಇಮ್ರಾನ್ ಖಾನ್ ದೇವಡಿ (19) ಶಿಕ್ಷೆಗೆ ಒಳಗಾದ ಅಪರಾಧಿ. ದಾವಣಗೆರೆಯ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಗೆ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಇಮ್ರಾನ್‌ಖಾನ್ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ.
ಇಮ್ರಾನ್ ದಾವಣಗೆರೆಯ ಬಿಐಇಟಿ ಹಾಸ್ಟೆಲ್ ಹಿಂಭಾಗದ ಆಂಜನೇಯ ಬಡಾ ವಣೆಯಲ್ಲಿನ ವಾಸದ ಮನೆಯಲ್ಲಿ ಕಾರ್ಯ ಕ್ರಮ ಇರುವುದಾಗಿ ಆಕೆಯನ್ನು ಕರೆಸಿ ಒತ್ತಾಯದಿಂದ ಅತ್ಯಾಚಾರ ವೆಸಗಿರುತ್ತಾನೆ.
ಈ ಕುರಿತು ಯಾರಿಗಾದರೂ ಹೇಳಿದರೆ ಇಬ್ಬರೂ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ 2019ರ ಜೂನ್ 3ರಂದು ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಯಾದ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ಕೆ. ನಾಗಮ್ಮ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು, ಅಪರಾಧಿಗೆ ಶಿಕ್ಷೆ ನೀಡಿ ತೀರ್ಪು ಹೊರಡಿಸಿದ್ದಾರೆ.
ಪಿರ್ಯಾದಿ ಪರ ಸರ್ಕಾರಿ ವಕೀಲೆ ಸುನಂದ ಮಡಿವಾಳರ್ ನ್ಯಾಯ ಮಂಡಿಸಿದ್ದರು.