ದಾವಣಗೆರೆ, ಅ. 25- ರಾಷ್ಟ್ರೀಯ ವಿಪತ್ತು ರೆಸ್ಪಾನ್ಸ್ ಫೋರ್ಸ್ (ಎನ್ಡಿಆರ್ಎಫ್) ಮಾರ್ಗಸೂಚಿಗಳನ್ನು ಪರಿಷ್ಕರಿಸಿ, ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಳ ಮಾಡುವ ಕಡೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಜಗಳೂರು ತಾಲ್ಲೂಕು ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಬೆಳೆ ಹಾನಿ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿದ್ದು, ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಳದ ನಿರೀಕ್ಷೆಯಲ್ಲಿ ಇದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ 1500 ತಾಂಡಾ, ಹಟ್ಟಿ, ಹಾಡಿ ಸೇರಿದಂತೆ ಇತರೆ ಜನ ವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ಕಲ್ಪಿಸಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ 1.20 ಲಕ್ಷ ಕುಟುಂಬಗಳಿಗೆ ಮನೆಗಳ ಹಕ್ಕುಪತ್ರ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಠಾಣಾ ವಿಸ್ತರಿಸಲು ಗ್ರಾಮ ಪಂಚಾಯ ತಿಗಳು ಆ ಜಾಗವನ್ನು ಗುರುತಿಸಿ, ಪಂಚಾಯತ್ ರಾಜ್ ಇಲಾಖೆಗೆ ವರದಿ ಸಲ್ಲಿಸಬೇಕು. ನಂತರ ಕಂದಾಯ ಇಲಾಖೆಗೆ ಗ್ರಾಮ ಠಾಣಾ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಅದಕ್ಕೆ ಬೇಕಾದ ಅಗತ್ಯ ಸಹಕಾರವನ್ನು ಕಾನೂನಾತ್ಮಕವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಗಳೂರು ತಾಲ್ಲೂಕಿನ ಎಲ್ಲೆಂದರಲ್ಲಿ ವಿಂಡ್ ಎನರ್ಜಿ ಫಾರ್ಮ್ ತೆರೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು, ಇದರ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳು ಸಮಿತಿ ರಚಿಸಿದ್ದಾರೆ. ವರದಿಯ ನಂತರ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.