ದಾವಣಗೆರೆ, ಅ. 25- ಯುಗಧರ್ಮ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಳೆ ದಿನಾಂಕ 26 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಯುಗಧರ್ಮ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಯುಗಧರ್ಮ ರಾಮಣ್ಣ ವಿರಚಿತ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಧಾಕೃಷ್ಣ ಪಲ್ಲಕ್ಕಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರತಿಷ್ಠಾನದ ಕಾರ್ಯದರ್ಶಿ ನವೀನ್ ಚನ್ನಗಿರಿ ಭಾಗವಹಿಸಲಿದ್ದಾರೆ.
ತ್ರಿಪದಿಗಳು, ಕನ್ನಡಮ್ಮನ ತೇರು, ಬ್ರಹ್ಮಾಂಡ, ತತ್ವಪದ, ನಿಶ್ಯಬ್ಧ ಪುಸ್ತಕ, ವಚನಗಳ ಕುರಿತು ಹಲವು ಗಣ್ಯರು ಮಾತನಾಡಲಿದ್ದಾರೆ. ಈ ಪ್ರತಿಷ್ಠಾನದ ಪ್ರಥಮ ವರ್ಷದ ಯುಗಧರ್ಮ ಪ್ರಶಸ್ತಿಗೆ ಚಿಕ್ಕಜಾಜೂರಿನ ವರದಿಗಾರ ಎಸ್.ಎಂ.ಆರ್. ಮಹೇಂದ್ರಪ್ಪ ಆಯ್ಕೆಯಾಗಿದ್ದು, ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ರಾಘವೇಂದ್ರ ನಾಯರಿ, ಬಿ. ದಿಳ್ಳೆಪ್ಪ ಉಪಸ್ಥಿತರಿದ್ದರು.