ಲೋಕಾಯುಕ್ತ ಬಲೆಗೆ ಹರಿಹರ ನಗರಸಭೆ ಕಂದಾಯ ಇಲಾಖೆ ನೌಕರರು

ಹರಿಹರ, ಅ.25- ಇಲ್ಲಿನ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು. ರಮೇಶ್ ಅವರು 20 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ರಾಣೇಬೆನ್ನೂರು ನಗರದ ರಾಜು ಲಕ್ಷ್ಮಣ್ ಕಾಂಬ್ಳೆ ಎಂಬಾತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಸಹೋದರ ಬಾಬು ಹರಿಹರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ಶ್ರೀದೇವಿ ಪೆಟ್ರೋಲ್ ಬಂಕ್ ನ ನಿವೇಶನದ ಸುಮಾರು 3-4  ವರ್ಷಗಳ ಕಂದಾಯ ಪಾವತಿಸಿಬೇಕಿತ್ತು. ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು. ರಮೇಶ ಅವರು ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದರು.

ಮೊತ್ತ ಕಡಿಮೆ ಮಾಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿದೆ. ಲಂಚದ ಹಣ ನೀಡಲು ಒಪ್ಪದ ಲಕ್ಷ್ಮಣ ಕಾಂಬ್ಳೆ, ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆೆಗೆ ದೂರು ನೀಡಿದ್ದರು. ಅ. 25 ರಂದು 20 ಸಾವಿರ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಕಂದಾಯ ಅಧಿಕಾರಿ ರಮೇಶ್ ಹಾಗೂ ನಿರೀಕ್ಷಕ ನಾಗೇಶ್ ಇಬ್ಬರನ್ನೂ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಉಪಾಧೀಕ್ಷಕಿ ಕೆ. ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಮಧುಸೂದನ್, ಪ್ರಭು ಸೂರಿನ್, ಪಿ. ಸರಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

error: Content is protected !!