ದಾವಣಗೆರೆ, ಅ. 22- ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಾಳೆ ದಿನಾಂಕ 23 ರ ಬುಧವಾರ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನವರ 200 ನೇ ವಿಜಯೋತ್ಸವ, 246 ನೇ ಜಯಂತ್ಯುತ್ಸವ ಸಮಾರಂಭ ನಡೆಯಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾಳೆ ಬುಧವಾರ ಬೆಳಿಗ್ಗೆ 9.30 ಕ್ಕೆ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಗಾಂಧಿ ಭವನದಲ್ಲಿ ಚೆನ್ನಮ್ಮಾಜಿ ಭಾವಚಿತ್ರಕ್ಕೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಿದ ನಂತರ ಪಂಚಮಸಾಲಿ ಯುವಕರ ಪಡೆಯ ಬೃಹತ್ ಬೈಕ್ ರ‍್ಯಾಲಿ ಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಗಾಂಧಿ ಭವನದಿಂದ ಆರಂಭವಾಗುವ ಬೈಕ್ ರ‍್ಯಾಲಿ ಯು ರಾಜ ಬೀದಿಗಳ ಮೂಲಕ, ಜಿಲ್ಲಾಡಳಿತ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಾಡಾಗಿರುವ ಕುವೆಂಪು ಕನ್ನಡ ಭವನ ತಲುಪಲಿದೆ ಎಂದು ವಿವರಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಸ್. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ. ಸಿಇಓ ಸುರೇಶ್ ಇಟ್ನಾಳ್, ಪಾಲಿಕೆ ಆಯುಕ್ತರಾದ ರೇಣುಕ, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ ಸೇರಿದಂತೆ ಇತರರು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎಸ್. ಯೋಗೇಶ್, ಮಂಜು ಪೈಲ್ವಾನ್, ಕೊಟ್ರಗೌಡ ಕ್ಯಾರಕಟ್ಟೆ, ಎನ್.ಎಸ್. ಆನಂದ್, ಶಂಕರ್ ಎಪಿಎಂಸಿ, ಆನಂದ್ ಜಿರ್ಲಿ ಮತ್ತಿತರರು ಉಪಸ್ಥಿತರಿದ್ದರು.