ಮೀಸಲಾತಿಗೆ ಆಗ್ರಹಿಸಿ ಛಲವಾದಿ ಸಮಾಜದ ವಕೀಲರ ವೇದಿಕೆ ಮನವಿ

 ದಾವಣಗೆರೆ, ಅ. 20-  ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಛಲವಾದಿ ಮತ್ತು ಮಾದಿಗ ಸಮಾಜ ಗಳ ವಕೀಲರ ವೇದಿಕೆಯಿಂದ ನಾಳೆ ದಿನಾಂಕ 21 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹಿರಿಯ ನ್ಯಾಯವಾದಿ ಬಿ.ಎಂ.ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸತತ ಮೂರು ದಶಕಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಿದ ತರುವಾಯ ವಿವಿಧ ಸಂಘಟನೆಗಳು, ಪ್ರಗತಿಪರ ಚಿಂತಕರು ಹೋರಾಟಕ್ಕೆ ಕೈಜೋಡಿಸಿದ ಪ್ರತಿಫಲವಾಗಿ ಸುಪ್ರೀಂಕೋರ್ಟ್  ಒಳಮೀಸಲಾತಿ ಆದೇಶ ನೀಡಿದೆಯಾದರೂ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ವೋಚ್ಛ ನ್ಯಾಯಾಲಯವು ಜನಸಂಖ್ಯೆ ಆಧರಿಸಿ ಆಯಾ ರಾಜ್ಯಗಳೇ ಒಳಮೀಸಲಾತಿ ನೀಡಬಹುದೆಂದು ಆದೇಶ ಹೊರಡಿಸಿ ಎರಡೂವರೆ ತಿಂಗಳು ಕಳೆದರೂ ಸರ್ಕಾರ ಒಳಮೀಸಲಾತಿ ನಿರ್ಧಾರ ಪ್ರಕಟಿಸಿಲ್ಲ. ಇದರಿಂದ ಸುಪ್ರೀಂ ಕೋರ್ಟ್ ಆದೇಶಕ್ಕೂ ಸರ್ಕಾರ ಕಿಮ್ಮತ್ತು ನೀಡುತ್ತಿಲ್ಲ ಎಂದು ಹರಿಹಾಯ್ದರು.

ಒಳಮೀಸಲಾತಿಯಿಂದ ಮಾತ್ರ ನಮ್ಮ ಮುಂದಿನ ಪೀಳಿಗೆಯ ಬದುಕು ಹಸನಾಗಲು ಸಾಧ್ಯ. ಸರ್ಕಾರ ಯಾವುದೇ ವಿಳಂಬ ಮಾಡದೆ ಈಗಾಗಲೇ ನ್ಯಾ. ಎ.ಜೆ.ಸದಾಶಿವ ಆಯೋಗ ಸಲ್ಲಿಸಿರುವ ವರದಿ ಅನುಸಾರ ಒಳಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು. ದೇವನೂರು ಮಹಾದೇವ ಸೇರಿ ಸಾಹಿತಿಗಳು ಮತ್ತು ಚಿಂತಕರು ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಎಸ್.ನೇತ್ರಾವತಿ, ಸುಭಾಶ್ಚಂದ್ರ ಬೋಸ್, ಎ.ಎನ್.ಲಿಂಗಮೂರ್ತಿ, ಹಾಲೇಶ್, ಎಸ್.ರಾಜಪ್ಪ, ಡಿ.ಸಿ.ತಿಪ್ಪೇಸ್ವಾಮಿ, ಟಿ.ಹನುಮಂತಪ್ಪ, ಚೌಡಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!