ದಾವಣಗೆರೆ, ಅ. 15- ಯುಬಿಡಿಟಿ ಕಾಲೇಜು ಉಳಿಸಲು, ಶೇ. 50 ಪೇಮೆಂಟ್ ಸೀಟ್ ರದ್ದುಪಡಿಸಬೇಕೆಂಬಿತರೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ ದಿನಾಂಕ 16 ರಂದು ಕರೆ ಕೊಟ್ಟಿರುವ ಬಂದ್ ಸಮಯದಲ್ಲಿ ಬಲವಂತವಾಗಿ ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಖಾಸಗಿ, ಸರ್ಕಾರಿ ಸಂಸ್ಥೆಗಳನ್ನು ಮುಚ್ಚಿಸುವಂತಿಲ್ಲ.
ಒಂದು ವೇಳೆ ಬಲವಂತವಾಗಿ ಮುಚ್ಚಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.
ಬಂದ್ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡುವಂತಿಲ್ಲ. ರಸ್ತೆ ತಡೆ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಮಾಡುವಂತಿಲ್ಲ. ಟಯರ್ ಗೆ ಬೆಂಕಿ ಹಚ್ಚುವುದು, ಪ್ರತಿಕೃತಿ ದಹಿಸುವಂತಿಲ್ಲ. ಬಂದ್ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಂಡರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್‌ಗಳನ್ನು ಹಾಕುವುದು, ಶೇರ್ ಮಾಡುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಹಾಗೂ ಸೌಹಾರ್ದಯುತ ಪ್ರತಿಭಟನೆ ಮಾಡಬೇಕು. ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಶಸ್ತ್ರ ತುಕಡಿಗಳನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ.