ದಾವಣಗೆರೆ, ಅ.15- ಜಿಲ್ಲೆಯಲ್ಲಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಜಿಲ್ಲಾಧಿಕಾರಿಗಳಿಗೆ ಈಚೆಗೆ ಮನವಿ ಸಲ್ಲಿಸಿತು.
ಈ ವೇಳೆ ರೈತ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಿದ್ದು, ಹಾಗಾಗಿ ಕರ್ನಾಟಕ ಹಾಲು ಒಕ್ಕೂಟವು ಪಶುಗಳ ಆಹಾರಕ್ಕಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರೈತರಿಂದ 3500 ರೂ.ಗಳಂತೆ ಮುಸುಕಿನ ಜೋಳ ಖರೀದಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಆದ ವಿವಿಧ ಬೆಳೆಗಳ ನಷ್ಟಕ್ಕೆ ಸರ್ಕಾರ ತುರ್ತಾಗಿ ಸ್ಪಂದಿಸಿ ಪರಿಹಾರ ಒದಗಿಸಬೇಕು ಮತ್ತು ಕಳೆದ ವರ್ಷದ ಬರ ಪರಿಹಾರ ಮೊತ್ತವನ್ನು ವಿಳಂಬ ಮಾಡದೇ ಕೂಡಲೇ ವಿತರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಹಾಗೂ ಡೈರಿ ಹಾಲಿನಿಂದ ಬಂದ ಹಣವು ಬ್ಯಾಂಕ್ ಖಾತೆಗೆ ಜಮೆಗೊಳ್ಳುತ್ತಿದ್ದಂತೆ ಸಾಲಕ್ಕೆ ಮುರುಗಡೆ ಮಾಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೇವಲ 527 ಕೆರೆಗಳಿದ್ದು, ಬರಗಾಲದಲ್ಲಿ ನೀರಿನ ಬವಣೆ ತಪ್ಪಿಸಲು ಕೆರೆಗಳ ಸಂಖ್ಯೆಯನ್ನು 1500ಕ್ಕೆ ಏರಿಸುವಂತೆ ಬೇಡಿಕೆ ಇಟ್ಟರು.
ಈ ವೇಳೆ ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೀಯ್ಯಾಪುರ ತಿರುಮಲೇಶ್, ಪ್ರಧಾನ ಕಾರ್ಯದರ್ಶಿ ಹೆಬ್ಬಾಳು ರಾಜಯೋಗಿ, ತಾಲ್ಲೂಕು ಕಾರ್ಯಾಧ್ಯಕ್ಷ ಪ್ರತಾಪ್ ಮಾಯಕೊಂಡ, ಪ್ರಧಾನ ಕಾರ್ಯದರ್ಶಿ ಸಾಣೆಕೆರೆ ಟಿ.ಗುರುಮೂರ್ತಿ, ನಾಗರಕಟ್ಟೆ ಜಯನಾಯ್ಕ, ದಶರಥ, ಬಾಡ ಹನುಮಂತಪ್ಪ ಇದ್ದರು.