`ದಾವಣಗೆರೆ ಬಂದ್‌’ಗೆ ರೈತ ಸಂಘದ ಬೆಂಬಲ

ದಾವಣಗೆರೆ, ಅ.13- ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಘೋಷಿಸಿದ ಅ.16ರ `ದಾವಣಗೆರೆ ಬಂದ್‌ ಹೋರಾಟ’ಕ್ಕೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಬೆಂಬಲ ನೀಡಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್‌ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಶೇ.50ರಷ್ಟು  ಸೀಟುಗಳನ್ನು ಪೇಮೆಂಟ್‌ಗೆ ಮಾರಾಟ ಮಾಡುತ್ತಿರುವುದನ್ನು ಎಐಡಿಎಸ್‌ಓ ಸಂಘಟನೆಯ ಜತೆಗೆ ವಾಸುದೇವ ಮೇಟಿ ಬಣದ ರೈತ ಸಂಘವು ಖಂಡಿಸಿದೆ ಎಂದರು.

ಮೆರಿಟ್‌ ಸೀಟ್‌ಗಳಿಗೆ ನಿಗದಿಪಡಿಸಿದ 43 ಸಾವಿರ ರೂ.ಗಳ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದ್ದು, ಈ ರೀತಿ ಶುಲ್ಕ ಏರಿಕೆ ಮಾಡುವ ಮೂಲಕ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಪೇಮೆಂಟ್ ಕೋಟಾ ರದ್ದುಗೊಳಿಸಿ, ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಪ್ರತಿಷ್ಠಿತ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು ಎಂಬ ವಿದ್ಯಾರ್ಥಿಗಳ ಒತ್ತಾಸೆಯನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ದಾವಣಗೆರೆಯ ಯುಬಿಡಿಟಿ ಕಾಲೇಜನ್ನು ರಾಜ್ಯದ ಬಡ ಹಾಗೂ ರೈತ ಮನೆತನದ ವಿದ್ಯಾರ್ಥಿಗಳಿಗಾಗಿ ಉಳಿಸಲು ಇದೇ ದಿನಾಂಕ 16ರಂದು `ದಾವಣಗೆರೆ ಬಂದ್‌’ಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.

ಈ ವೇಳೆ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಚಮ್ಮನಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷ ಕಿತ್ತೂರು ಹನುಮಂತಪ್ಪ, ಕಾರ್ಯದರ್ಶಿ ಕೋಲ್ಕುಂಟೆ ಉಚ್ಚಂಗೆಪ್ಪ, ಮಾಯಕೊಂಡ ಹೋಬಳಿ ಅಧ್ಯಕ್ಷ ಚಿಕ್ಕತೊಗಲೇರಿ ಮಲ್ಲಿಕಾರ್ಜುನ್‌, ಹರಿಹರ ತಾಲ್ಲೂಕು ಅಧ್ಯಕ್ಷ ಸುನೀಲ್‌ ಹೊಟ್ಟಿಗೇನಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!