ಹರಿಹರ, ಅ. 8- ನಗರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಇಲ್ಲಿ ಅಧ್ಯಕ್ಷರು ಮತ್ತು ಪೌರಾಯುಕ್ತರಲ್ಲಿ ಯಾರು ಸುಪ್ರೀಂ ಎಂಬುದು ಅರಿಯದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯ ಆರ್.ಸಿ ಜಾವೇದ್ ದೂರಿದರು.
ನಗರಸಭೆ ಸಭಾಂಗಣದಲ್ಲಿ ಈಚೆಗೆ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿನ ಸರ್ಕಾರಿ ಶಾಲೆ, ದೇವಸ್ಥಾನ, ಮಸೀದಿ, ಚರ್ಚ್ಗಳಿಗೆ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಕಳೆದ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದ್ದರು. ಆದರೆ ಜಲಸಿರಿ ಅಧಿಕಾರಿಗಳು ಪುನಃ ಕುಡಿಯುವ ನೀರಿನ ತೆರಿಗೆ ಕಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.
ಹಿರಿಯ ಸದಸ್ಯ ಎ. ವಾಮನಮೂರ್ತಿ ಮಾತನಾಡಿ, ನಗರದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಜಮೀನು ಖರೀದಿಸಿ ನೀರಿನ ಶೇಖರಣಾ ಘಟಕ ಸ್ಥಾಪನೆ ಮಾಡದಿದ್ದರೆ, ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಗಮನ ಸೆಳೆದರು.
ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಗರಸಭೆಯಲ್ಲಿ ಯಾವ ಕೆಲಸ ಕೂಡ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ದೂಡಾ ಕಚೇರಿ ಆರಂಭಕ್ಕೆ ಮುಂದಾಗಿಲ್ಲ. ಇ-ಸ್ವತ್ತು ದಾಖಲೆಗಳನ್ನು ನೀಡುತ್ತಿಲ್ಲ. ಖಾತೆ ಬದಲಾವಣೆ ಆಗುತ್ತಿಲ್ಲ. ಇಂತಹ ಅನೇಕ ಸಮಸ್ಯೆಗಳು ಇದ್ದು, ಮುಂದಿನ ಸಭೆಯೊಳಗೆ ಸರಿಪಡಿಸಬೇಕು. ಇಲ್ಲವಾದರೆ ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಸದಸ್ಯೆ ನಾಗರತ್ನ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂದೂ ಕೆಲಸವನ್ನು ಮಾಡಲಿಕ್ಕೆ ಆಗುತ್ತಿಲ್ಲ. ಸಾರ್ವಜನಿಕರು ಮನೆ ಮುಂದೆ ಬಂದು ಛೀಮಾರಿ ಹಾಕುತ್ತಿದ್ದಾರೆ. ರಾಜೀನಾಮೆ ನೀಡಬೇಕು ಎನ್ನುವಷ್ಟು ಬೇಸರ ಆಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾ ರೆಂದು ಕಿಡಿಕಾರಿದರು.
ಸದಸ್ಯ ರಜನಿಕಾಂತ್ ಮಾತನಾಡಿ, ನನ್ನ ವಾರ್ಡಿನಲ್ಲಿ ಸ್ವಚ್ಛತೆಗೆ ಜೆಸಿಬಿ ವಾಹನ ಕಳಿಸಿ ಎಂದು ಹೇಳಿದರೆ ಡೀಸೆಲ್ ಹಾಕಲಿಕ್ಕೆ ಹಣ ಇಲ್ಲ ಎಂದು ಸಂತೋಷ, ರವಿಪ್ರಕಾಶ್ ಹೇಳುತ್ತಾರೆ. ಉಪಾಧ್ಯಕ್ಷ ಜಂಬಣ್ಣ, ನಾನು ಸಾವಿರ ರೂ. ಡೀಸೆಲ್ ಹಾಕಿಸಿ ಸ್ವಚ್ಛತೆಗೆ ಮುಂದಾಗಿರುವೆ ಅಂತ ಹೇಳುತ್ತಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಜೆಸಿಬಿ ತಂದಿರುವುದು ಅದನ್ನು ನಿಲ್ಲಿಸಿ ಪೂಜೆ ಮಾಡಲಿಕ್ಕೆ ಎಂದು ಪ್ರಶ್ನಿಸಿದರು. ಸದಸ್ಯರಾದ ದಾದಾ ಖಲಂದರ್, ಎಸ್.ಎಂ. ವಸಂತ್, ರತ್ನ ಉಜ್ಜೇಶ್, ನಿಂಬಕ್ಕ ಚಂದಪೂರ್ ಸಮಸ್ಯೆಗಳ ಕುರಿತು ಮಾತನಾಡಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಶಾಲೆ, ದೇವಸ್ಥಾನ, ಮಸೀದಿ, ಚರ್ಚ್ಗಳಿಗೆ ಉಚಿತ ನೀರು ಸರಬರಾಜು ಮಾಡುವಲ್ಲಿ, ಮುಂದಿನ ಸಭೆಯಲ್ಲಿ ವಿಷಯ ಚರ್ಚೆಗೆ ತಂದು ಅನುಮೋದನೆ ಪಡೆದ ಮೇಲೆ ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಸದಸ್ಯರಾದ ಕೆ.ಜಿ. ಸಿದ್ದೇಶ್, ದಿನೇಶ್ ಬಾಬು, ಬಿ.ಅಲ್ತಾಫ್, ಅಶ್ವಿನಿ ಕೃಷ್ಣ, ಪಕ್ಕೀರಮ್ಮ, ಉಷಾ ಮಂಜುನಾಥ್, ಶಹಜಾದ್ ಸನಾವುಲ್ಲಾ, ಎಂ.ಆರ್. ಮುಜಾಮಿಲ್ ಬಿಲ್ಲು, ವಿರುಪಾಕ್ಷಪ್ಪ, ಅಬ್ದುಲ್ ಅಲಿಂ, ಲಕ್ಷ್ಮೀ ಮೋಹನ್ ದುರುಗೋಜಿ, ಸುಮಿತ್ರಾ, ಹನುಮಂತಪ್ಪ, ಕೆ.ಬಿ. ರಾಜಶೇಖರ, ಜೋಸೆಫ್ ದಿವಾಕರ್, ಸಂತೋಷ ದೊಡ್ಡಮನಿ, ಇಸ್ಮಾಯಿಲ್, ರಿಜ್ವಾನ್ ಉಲ್ಲಾ ಮತ್ತು ಅಧಿಕಾರಿಗಳು ಹಾಜರಿದ್ದರು.
ಅಧ್ಯಕ್ಷರ ಆಕ್ರೋಶ: ನಗರಸಭೆ ಅಧ್ಯಕ್ಷೆಯಾಗಿ ಒಂದೂವರೆ ತಿಂಗಳು ಕಳೆದರೂ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರು ನನ್ನ ಬಳಿ ಬಂದು ಒಂದು ದಿನವೂ ಕೂಡ ಚರ್ಚೆ ಮಾಡಿರುವುದಿಲ್ಲ. ಅಲ್ಲದೇ ಸದಸ್ಯರಿಗೆ ಗೌರವವನ್ನೂ ನೀಡುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಆಕ್ರೋಶ ವ್ಯಕ್ತಪಡಿಸಿದರು.
ಜನ ನಮ್ಮನ್ನು ನಂಬಿ ಮತ ಹಾಕಿ ಗೆಲ್ಲಿಸಿರುತ್ತಾರೆ. ಅಧಿಕಾರಿ ಮತ್ತು ಸಿಬ್ಬಂದಿ ನಿಷ್ಕ್ರಿಯತೆಯಿಂದ ವರ್ತಿಸುವುದಕ್ಕೆ ಮುಂದಾದರೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.