ದಾವಣಗೆರೆ, ಅ. 7- ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮುಡಾ ಹಗರಣದ ಪ್ರಮುಖ ವಿಚಾರವ ನ್ನಾಗಿ ವೈಭವೀಕರಿಸಿ ಮತ ಪಡೆಯಲು ಸರ್ಕಸ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಯವರ ನಡೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ.
ಜೊತೆಗೆ ಡೇರಾ ಸಚ್ಚಾ ಸೌದಾ ಧಾರ್ಮಿಕ ಗುಂಪಿನ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಎಂಬ ಅಪರಾಧಿಯು ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರೂ ಸಹ ವಿಶೇಷವಾಗಿ ಹರಿಯಾಣದಲ್ಲಿನ ಚುನಾವಣೆ ಸಮಯದಲ್ಲಿ ಆತ ಪೆರೋಲ್ ಮೇಲೆ ಹೊರಬರುವಂತೆ ಮೋದಿ ಪಟಾಲಂ ತಂತ್ರ ರೂಪಿಸಿ ಒಬ್ಬ ಅಪರಾಧಿಯು ಪೆರೋಲ್ ಎಂಬ ಟ್ರಂಪ್ ಕಾರ್ಡ್ ಬಳಸಿ ಚುನಾವಣೆ ಸಮಯದಲ್ಲಿ ಹೊರಗೆ ಬಂದು ಚುನಾವಣೆ ರಾಜಕೀಯದ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಭಾಗವಹಿಸಲು ಅನುವು ಮಾಡಿ ಹರಿಯಾಣ ಚುನಾವಣೆ ಗೆಲ್ಲಲು ಹರ ಸಾಹಸ ಮಾಡಿದ್ದಾರೆ.
ದೇಶದಲ್ಲಿ ಚುನಾವಣಾ ಆಯೋಗವಿದ್ದರೂ ಅದು ಸಹ ಸಿಬಿಐ, ಐಟಿ, ಇಡಿಯಂತೆ ಮೋದಿ ಪಕ್ಷದ ಅಂಗ ಸಂಸ್ಥೆಗಳಂತೆ ಕೆಲಸ ಮಾಡುತ್ತಿದೆ. ಆದರೆ ಪ್ರಜ್ಞಾವಂತ ಮತದಾರರು ಮೋದಿಗೆ ಮಂಗಳಾರತಿ ಮಾಡುವುದು ನಿಶ್ಚಿತ ಎಂದು ಸಮೀಕ್ಷೆಗಳು ಹೇಳಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ಆಗಿರುವ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಅವರುಗಳ ವಿರುದ್ಧ ಹರಿಯಾಣದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸಿದರು. ನಾಳೆ ಹರಿಯಾಣ ಫಲಿತಾಂಶ ಬರುತ್ತೆ. ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಬಸವರಾಜ್ ಭವಿಷ್ಯ ನುಡಿದಿದ್ದಾರೆ.