ದಾವಣಗೆರೆ, ಅ.7- ನಗರದ ಯುಬಿಡಿಟಿ ಕಾಲೇಜನ್ನು ಬಡ ವಿದ್ಯಾರ್ಥಿಗಳಿಗೆ ಉಳಿಸಿ ಎಂದು ಇದೇ ದಿನಾಂಕ 16 ರಂದು ಎಐಡಿಎಸ್‌ಓ ಸಂಘಟನೆಯ ವತಿಯಿಂದ ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ ಎಂದು ಸಂಘಟನಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೇಳೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ದಾವಣಗೆರೆ ಹೆಮ್ಮೆಯ ಸಂಸ್ಥೆಯಾಗಿರುವ ಯುಬಿಡಿಟಿ ಕಾಲೇಜಿನಲ್ಲಿ ಸೀಟು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಅತ್ಯಂತ ಹಳೆಯ ಇಂಜಿನಿಯರಿಂಗ್ ಕಾಲೇಜುಗಳಲ್ಲೊಂದು. 1951 ರಲ್ಲಿ ದಾವಣಗೆರೆಯ ದಾನಿಗಳು ನೀಡಿದ್ದ ಜಾಗ, ಹಣದಲ್ಲಿ ಕಟ್ಟಿರುವ ಕಾಲೇಜು ಈಗ 73 ವರ್ಷಗಳನ್ನು ಪೂರೈಸಿ, ಅಮೃತ ಮಹೋತ್ಸವದತ್ತ ಹೆಜ್ಜೆ ಹಾಕುತ್ತಿದೆ ಎಂದರು.
ಕಳೆದ ಏಳು ದಶಕಗಳಿಂದ ರಾಜ್ಯದ ಬಡ, ರೈತ, ಕಾರ್ಮಿಕರ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಇಂಜಿನಿಯರಿಂಗ್ ಶಿಕ್ಷಣ ನೀಡುತ್ತಾ ಬಂದಿರುವ ಈ ಕಾಲೇಜಿನಲ್ಲಿ ಇದೀಗ ಶೇ. 50 ರಷ್ಟು ಪೇಮೆಂಟ್ ಕೋಟಾ ಜಾರಿಗೊಳಿಸಲಾಗಿದೆ. ಈ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ 504 ಸೀಟುಗಳಲ್ಲಿ 254 ಸೀಟುಗಳನ್ನು 97 ಸಾವಿರ ರೂ.ಗಳಿಗೆ ಮಾರಲಾಗುತ್ತಿದೆ. ಇನ್ನುಳಿದ 250 ಮೆರಿಟ್ ಸೀಟುಗಳಿಗೆ ನಿಗದಿಪಡಿಸಿರುವ 43 ಸಾವಿರ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿದೆ ಎಂದು ಹೇಳಿದರು.
ಶುಲ್ಕ ಕಡಿಮೆ ಮಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪ್ರವೇಶಿಸಲು ಅವಕಾಶ ಕಲ್ಪಿಸುವುದನ್ನು ಬಿಟ್ಟು ಅರ್ಧದಷ್ಟು ಸೀಟುಗಳನ್ನು ಪೇಮೆಂಟ್ ಗೆ ಮಾರುತ್ತಿರುವುದು ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಈ ನಡೆಯ ವಿರುದ್ಧ ಈಗಾಗಲೇ ಎಐಡಿಎಸ್‌ಓ ನೇತೃತ್ವದಲ್ಲಿ `ಯುಬಿಡಿಟಿ ಉಳಿಸಿ’ ಹೋರಾಟದಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ. ಕೂಡಲೇ ಪೇಮೆಂಟ್ ಕೋಟಾ ರದ್ದುಗೊಳಿಸಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಪ್ರತಿಷ್ಠಿತ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕೆಂಬುದು ವಿದ್ಯಾರ್ಥಿಗಳ ಒತ್ತಾಸೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೂಜಾ ನಂದಿಹಳ್ಳಿ, ಟಿ.ಎಸ್. ಸುಮನ್, ಅಖಿಲೇಶ್, ಅಭಿಷೇಕ್, ರೋಹಿತ್, ಗೌತಮ್, ಜೀವನ್ ಉಪಸ್ಥಿತರಿದ್ದರು.