ಸಾಂಸ್ಕೃತಿಕ, ಅಧ್ಯಾತ್ಮದ ಮಹತ್ವ ಸಾರುವ ದಸರಾ

ದಾವಣಗೆರೆ, ಅ.4- ವಿಶ್ವ ಹಿಂದೂ ಪರಿಷದ್‌ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ನಗರದ ಪಿ.ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾ ದೇವಿಯ ವಿಗ್ರಹ, ಘಟ ಸ್ಥಾಪನೆ ನೆರವೇರಿತು.

ನಿಟ್ಟುವಳ್ಳಿಯ ದುರ್ಗಾಂಬಿಕಾ ದೇವಿ ದೇವಸ್ಥಾನ ದಿಂದ ಬೀರಲಿಂಗೇಶ್ವರ ದೇವಸ್ಥಾನದ ಆವರಣದವರೆಗೆ ದೇವಿಯ ವಿಗ್ರಹವನ್ನು ಮೆರವಣಿಗೆಯೊಂದಿಗೆ ತರಲಾಯಿತು. ಹಿಂದೂ ಸಮಾಜದ ಹಿರಿಯರು ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಮೆರವಣಿಗೆಯು ನಗರದ ರಾಜ ಬೀದಿಗಳಲ್ಲಿ ಸಾಗಿ ಬೀರಲಿಂಗೇಶ್ವರ ಆವರಣ ತಲುಪಿತು. ಮಂಗಳವಾದ್ಯಗಳು, ಗಜರಾಜನ ಗಾಂಭಿರ್ಯ ನಡಿಗೆ ಹಾಗೂ ನಾಸಿಕ್‌ ಡೋಲಿನ ಕಲಾ ತಂಡಗಳು ಮೆರವಣಿಗೆಯಲ್ಲಿ ಕಂಡು ಬಂದವು.

ಈ ವೇಳೆ ಆಶೀರ್ವಚನ ನೀಡಿದ ಜಡೆಸಿದ್ದೇಶ್ವರ ಸ್ವಾಮೀಜಿ ಅವರು, ನವರಾತ್ರಿಯ ಈ ದಿನಗಳಲ್ಲಿ ಶ್ರೀ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸುವವರಿಗೆ ದೇವಿಯ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ಹೇಳಿದರು.

ದಸರಾ ಮಹೋತ್ಸವವು ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಎಂದ ಅವರು, ದೇವತೆಗೆ ಹತ್ತು ಹಲವು ರೂಪಗಳಿದ್ದು, ಶಕ್ತಿ ಮಾತ್ರ ಒಂದೆಯಾಗಿದೆ. ಹಾಗಾಗಿ ಎಲ್ಲರೂ ಭಕ್ತಿಯಿಂದ ದೇವಿಯ ಕೃಪೆಗೆ ಪಾತ್ರರಾಗಿ ಎಂದರು.

ಈ ವೇಳೆ ಪಾಲಿಕೆ ಸದಸ್ಯ‌ ಎಸ್.ಟಿ. ವೀರೇಶ್, ಸಮಿತಿ ಸಂಚಾಲಕ ಕೆ.ಆರ್. ಮಲ್ಲಿಕಾರ್ಜುನ್, ವಿನಾಯಕ್‌ ರಾನಡೆ, ರಾಕೇಶ್ ಜಾಧವ್, ಕೆಇಬಿ ಶೇಖರ್, ಹೆಚ್‌.ಎಸ್‌. ಸುರೇಶ್, ಕೆ.ಬಿ. ಗುರುಶಾಂತ್‌ ಮತ್ತಿತರರಿದ್ದರು.

error: Content is protected !!