ಇಂದಿನಿಂದ ಗ್ರಾ.ಪಂ ನೌಕರರಿಂದ ಅನಿರ್ದಿಷ್ಟಾವಧಿ ಹೋರಾಟ

ದಾವಣಗೆರೆ, ಅ.3- ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾ.ಪಂ ಕುಟುಂಬದ ಎಲ್ಲಾ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಗ್ರಾ.ಪಂ ಸೇವೆ ಸ್ಥಗಿತಗೊಳಿಸಿ  ನಾಳೆ ದಿನಾಂಕ 4ರಿಂದ ಅನಿರ್ದಿಷ್ಟಾವಧಿ ಧರಣಿ ಕೂರಲಿದ್ದೇವೆ ಎಂದು ಪಿಡಿಒ ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಗಮೇಶ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂನಲ್ಲಿ ಕೆಲಸ ಮಾಡುವ 11 ವೃಂದಗಳ ಸಂಘದ ಸಂಯುಕ್ತಾಶ್ರಯದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಪಿಡಿಒ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್‌ ಗ್ರೂಪ್‌ `ಬಿ’ ದರ್ಜೆಗೆ ಉನ್ನತೀಕರಿಸಬೇಕು. ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕೆಂದು ಒತ್ತಾಯಿಸಿದರು.

ಗ್ರೇಡ್‌-1 ಕಾರ್ಯದರ್ಶಿಗಳಿಗೆ, ಪಿಡಿಒ ಪದೋನ್ನತಿಯನ್ನು ಜಿಲ್ಲಾ ಮಟ್ಟದಲ್ಲಿ ಕೊಡುವುದು ಮತ್ತು ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು, ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಬೇಕು ಎಂದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್‌ ಹುದ್ದೆಗಳಲ್ಲಿ ಶೇ.33ರಷ್ಟು ಹುದ್ದೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ವೀರೇಶ್‌, ಚೇತನ್‌, ಗಣೇಶ್‌, ಸಿದ್ದೇಶ್‌, ರಂಗಸ್ವಾಮಿ, ಚಿಕ್ಕಣ್ಣ, ಆನಂದ್, ಮರುಳಸಿದ್ದಪ್ಪ, ವಾಸುದೇವ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!