ಶೋಭಾಯಾತ್ರೆಯಲ್ಲಿ ಯಾವುದೇ ರಾಜಕಾರಣಿಗಳು, ಚಿತ್ರನಟರು, ವೈಯಕ್ತಿಕ ಬಾವುಟ ಹಾಗೂ ಬ್ಯಾನರ್ಸ್ ಪ್ರದರ್ಶನ ಮಾಡದಂತೆ ಸೂಚನೆ ನೀಡಲಾಗಿದೆ.
ಆಟೋ ಚಾಲಕರು, ಬಸ್ ಚಾಲಕರು, ಲಾರಿ ಚಾಲಕರು, ಅಂಗಡಿ ಮುಂಗಟ್ಟೆಗಳವರು ಸ್ವಪ್ರೇರಣೆಯಿಂದ ಬಂದ್ ಮಾಡಿ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.
– ಜೊಳ್ಳಿ ಗುರು,
ಅಧ್ಯಕ್ಷರು, ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್
ದಾವಣಗೆರೆ, ಅ. 3- ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶಮೂರ್ತಿ ವಿಸರ್ಜನೆ ನಾಡಿದ್ದು ದಿನಾಂಕ 5 ರಂದು ನಡೆಯಲಿದ್ದು, ಇದರ ಅಂಗವಾಗಿ ನಾಳೆ ದಿನಾಂಕ 4 ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಣೇಶ್ ಮೂರ್ತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೈಕ್ ರಾಲಿ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನ ದಿಂದ ಆರಂಭಗೊಂಡು ಮಹಾನಗರ ಪಾಲಿಕೆ ರಸ್ತೆ, ಗಡಿಯಾರ ಕಂಬ,ಕಾಳಿಕಾದೇವಿ ರಸ್ತೆ, ದುರ್ಗಾಂಬಿಕ ದೇವಿ ದೇವಸ್ಥಾನ ರಸ್ತೆ, ಹೊಂಡದ ವೃತ್ತ, ಅರುಣ ಚಿತ್ರಮಂದಿರ ವೃತ್ತ, ಎಂಸಿಸಿ ಎ ಬ್ಲಾಕ್, ವಿನೋಬನಗರ ಎರಡನೇ ಮುಖ್ಯರಸ್ತೆ, ವಿದ್ಯಾನಗರ, 60 ಅಡಿ ರಸ್ತೆ, ಡಾಂಗೆಪಾರ್ಕ್ ರಸ್ತೆ, ಶಿವಪ್ಪಯ್ಯ ವೃತ್ತ, ಜಯದೇವ ವೃತ್ತದ ಮೂಲಕ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ರಾಲಿಗೆ ಜನಪ್ರತಿನಿಧಿಗಳು ಚಾಲನೆ ನೀಡಲಿದ್ದಾರೆ ಎಂದರು.
ದಿನಾಂಕ 5 ರಂದು ಬೆಳಿಗ್ಗೆ 10.30 ಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆಂದರು.
ಹೈಸ್ಕೂಲ್ ಮೈದಾನದಿಂದ ಆರಂಭವಾ ಗುವ ಬೃಹತ್ ಶೋಭಾಯಾತ್ರೆ ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಲಾಯರ್ ರಸ್ತೆ, ಪಿ.ಬಿ. ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯಲಿದ್ದು, ನಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಬಾತಿ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.
ಶೋಭಾಯಾತ್ರೆಯಲ್ಲಿ ಚಂಡೆ ನಾದ, ಡ್ರಮ್‌ಸೆಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ 11 ಕಲಾ ತಂಡಗಳು, ಮಹಿಳೆಯರಿಗಾಗಿ ಪ್ರತ್ಯೇಕ ಸೇರಿದಂತೆ ಒಟ್ಟು ಐದು ಡಿಜೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುಮಾರು ಐದರಿಂದ ಆರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಬಂಟಿಂಗ್ಸ್, ಬಾವುಟಗಳನ್ನು ಕಟ್ಟಲಾಗಿದೆ. ಬಸವಣ್ಣ, ವಾಲ್ಮೀಕಿ ಮಹರ್ಷಿ, ಕನಕದಾಸರು ಸೇರಿದಂತೆ 11 ಕ್ಕೂ ಅಧಿಕ ಟ್ಯಾಬ್ಲೋಗಳನ್ನು ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಗಿ ಜಯಪ್ರಕಾಶ್, ಕಮಲ್ ಗಿರೀಶ್, ಸಿದ್ದೇಶಪ್ಪ, ಗುರು, ಚಂದ್ರಣ್ಣ, ಪ್ರಕಾಶ್ ಐಗೂರು ಉಪಸ್ಥಿತರಿದ್ದರು.