11 ಕೇಂದ್ರಗಳಲ್ಲಿ 6512 ಅಭ್ಯರ್ಥಿಗಳು ನೋಂದಣಿ
ದಾವಣಗೆರೆ, ಅ.1- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ನಾಡಿದ್ದು ದಿನಾಂಕ 3 ರಂದು ಪಿಎಸ್‍ಐ ಪರೀಕ್ಷೆ ನಡೆಯಲಿದ್ದು, ನಗರದ 11 ಕೇಂದ್ರಗಳಲ್ಲಿ 6,512 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯಲ್ಲಿ ಯಾವುದೇ ದೂರು, ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಪರೀಕ್ಷಾ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಎಸ್‍ಐ ಹುದ್ದೆಗಳ ಆಯ್ಕೆಗೆ 2 ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ನಂತರ ಮಧ್ಯಾಹ್ನ 12.30 ರಿಂದ 2ಗಂಟೆವರೆಗೆ 2 ನೇ ಅವಧಿಯ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತಪಾಸ ಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜ ರಿರಬೇಕು. ಅಲ್ಲದೇ ಬೆಳಿಗ್ಗೆ 9-45ರ ನಂತರ ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣವನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ತಿಳಿಸಿದರು.
ಮೊದಲನೆ ಪತ್ರಿಕೆಯ ನಂತರ ಎರಡನೇ ಪತ್ರಿಕೆ ಪ್ರಾರಂಭ ಆಗುವ ಮೊದಲು ಇರುವ ಮೂವತ್ತು ನಿಮಿಷಗಳ ಕಾಲಾವಧಿಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರ ಹೋಗಲು ಅನುಮತಿಸುವುದಿಲ್ಲ. ಅಭ್ಯರ್ಥಿಗಳು ತಮ್ಮೊಡನೆ ವೈದ್ಯಕೀಯ ಔಷಧಿ, ಮಾತ್ರೆಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.