ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕಪ್, ಹಾಳೆ, ಗುಟ್ಕಾ, ಸಿಗರೇಟ್‍ಗಳ ಮಾರಾಟ ನಿಷೇಧ

ದಾವಣಗೆರೆ, ಸೆ. 24- ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ಈ ಹಿಂದೆ ಪಾಲಿಕೆಯಿಂದ ನೋಂದಾಯಿಸಲ್ಪಟ್ಟ, ನೋಂದಣಿ ಮಾಡಿಸದೇ ಇರುವ ಬೀದಿ ಬದಿ ವ್ಯಾಪಾರಿಗಳು ನಗರದ ರಸ್ತೆ ಬದಿಗಳಲ್ಲಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ರಸ್ತೆಗಳ ಸ್ವಚ್ಛತೆಗೆ ತೊಂದರೆಯಾಗುವಂತೆ ತಳ್ಳುವ ಗಾಡಿಗಳಲ್ಲಿ ಚಹಾ, ತಿಂಡಿ, ಪ್ಲಾಸ್ಟಿಕ್ ಕಪ್, ಗುಟ್ಕಾ, ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಅದರಿಂದ ಉತ್ಪತ್ತಿಯಾದ ತ್ಯಾಜ್ಯಗಳನ್ನು ರಸ್ತೆ, ಚರಂಡಿ, ಖಾಲಿ ನಿವೇಶನಗಳಲ್ಲಿ ಹಾಕಿ ಸುಡುತ್ತಿರುವುದು ಕಂಡುಬಂದಿರುತ್ತದೆ. 

ಇದರಿಂದಾಗಿ ಚರಂಡಿಗಳು ಬ್ಲಾಕ್ ಆಗಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುವುದಲ್ಲದೇ, ವಾಯು ಮಾಲಿನ್ಯಕ್ಕೂ ಕಾರಣವಾಗಿರುತ್ತದೆ. ಆದ್ದರಿಂದ ಎಲ್ಲಾ ಬೀದಿಬದಿ ವ್ಯಾಪಾರಿಗಳು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವಂತಹ ಪ್ಲಾಸ್ಟಿಕ್ ಹಾಳೆಗಳು, ಪ್ಲಾಸ್ಟಿಕ್ ಕಪ್, ಗುಟ್ಕಾ, ಸಿಗರೇಟ್‍ಗಳನ್ನು ಮಾರಾಟ ಮಾಡದಂತೆ ಹಾಗೂ ಕಸವನ್ನು ಹೊರಗಡೆ ಚೆಲ್ಲಿ ಸುಡದಂತೆ ಎರಡು ತ್ಯಾಜ್ಯ ಸಂಗ್ರಾಹಕಗಳನ್ನಿರಿಸಿ, ತ್ಯಾಜ್ಯವನ್ನು ನಿಗದಿತ ತ್ಯಾಜ್ಯ ಸಂಗ್ರಹಕಾರರಿಗೆ ಬಳಕೆದಾರರ ಶುಲ್ಕ ಪಾವತಿಸಿ ನೀಡಬೇಕು ಎಂದು ಸೂಚಿಸಲಾಗಿದೆ. 

ಈ ಸೂಚನೆಗಳನ್ನು ಉಲ್ಲಂಘಿಸಿ ನಗರ ಸ್ವಚ್ಛತೆಗೆ ಧಕ್ಕೆಯುಂಟು ಮಾಡುವುದು ಕಂಡುಬಂದಲ್ಲಿ ದಂಡ ವಿಧಿಸುವುದರೊಂದಿಗೆ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ಅವರು ಎಚ್ಚರಿಸಿದ್ದಾರೆ.

error: Content is protected !!