ದಾವಣಗೆರೆ, ಸೆ.19 – ದೃಶ್ಯಕಲಾ ಮಹಾ ವಿದ್ಯಾಲಯದ 60ನೇ ವರ್ಷದ ವಜ್ರ ಮಹೋತ್ಸವವನ್ನು ನಾಡಿದ್ದು ದಿನಾಂಕ 21 ಹಾಗೂ 22ರಂದು ಹಮ್ಮಿಕೊಳ್ಳಲಾಗಿದೆ ಎಂದು ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ, ಕಲಾ ಶಾಲೆಯ ಹಳೆಯ ವಿದ್ಯಾರ್ಥಿ ಚಿ.ಸು. ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾ ವಿದ್ಯಾಲಯದ ಸಹಯೋಗದಲ್ಲಿ ಈ ಸಮಾರಂಭ ನಡೆಸಲಾಗುತ್ತಿದೆ ಎಂದರು.
ನಾಡಿದ್ದು ದಿನಾಂಕ 21ರ ಶನಿವಾರ ಬೆಳಿಗ್ಗೆ 9.30ಕ್ಕೆ ಶೋಭಾಯಾತ್ರೆ ನಡೆಯಲಿದೆ. 11.30 ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಮತ್ತು ಕಲಾಕೃತಿಗಳ ಕ್ಯಾಟಲಾಗ್ ಬಿಡುಗಡೆ, ಕಲಶ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಇತರರು ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 3ಕ್ಕೆ ಕಾಲೇಜಿನ ಅನುಭವಗಳ ಮೆಲುಕು ಕಾರ್ಯಕ್ರಮ ಹಾಗೂ ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ದಿನಾಂಕ 22 ರ ಭಾನುವಾರ ಬೆಳಗ್ಗೆ 9ಕ್ಕೆ ಕಲಾ ಶಾಲೆ ಆವರಣದಲ್ಲಿ 60 ಬ್ಯಾಚ್‌ಗಳ ಹಳೆಯ ವಿದ್ಯಾರ್ಥಿಗಳಿಂದ 60 ಸಸಿ ನೆಡುವ ಕಾರ್ಯ ಕ್ರಮವಿದೆ. 10ಕ್ಕೆ ಕಲಾ ಪ್ರಾತ್ಯಕ್ಷಿಕೆಗಳು, ಮಧ್ಯಾಹ್ನ 12 ಕ್ಕೆ ದೃಶ್ಯ ಪ್ರಸ್ತುತಿ, 3 ಕ್ಕೆ ಕಾಲೇಜಿನ ಅನುಭವಗಳ ಮೆಲುಕು, ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್ ಎಂ. ಪಾಟೀಲ್ ಇತರರು ಭಾಗವಹಿಸಲಿದ್ದಾರೆ.
ವಜ್ರಮಹೋತ್ಸವದ ಅಂಗವಾಗಿ ನಾಳೆ ದಿನಾಂಕ 20 ರಿಂದ 22ರ ವರೆಗೆ 3 ದಿನಗಳ ಕಾಲ ರಾಜ್ಯ ಮಟ್ಟದ ಕಲಾವಿದರ ಶಿಬಿರ ನಡೆಯಲಿದೆ ಎಂದು ತಿಳಿಸಿದರು. ವಜ್ರ ಮಹೋತ್ಸವ ಸಮಿತಿಯ ಗಣಪತಿ ಎಸ್.ಹೆಗಡೆ, ಮಹಾಂತೇಶ್ ಹರ್ತಿ, ಸುರೇಶ್ ಎಸ್. ವಾಘ್ಮೋರೆ ಪತ್ರಿಕಾಗೋಷ್ಠಿಯಲ್ಲಿದ್ದರು.