ದಾವಣಗೆರೆ, ಸೆ.17- ನಿವೃತ್ತರಾದ ಅಂಗನ ವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರೆಲ್ಲರಿಗೂ ಗ್ರಾಚ್ಯುಟಿ ನೀಡ ಬೇಕೆಂಬುದು ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಡಿದ್ದು ದಿನಾಾಂಕ 19ರಂದು `ವಿಧಾನಸೌಧ ಚಲೋ ಚಳವಳಿ’ ಆಯೋಜಿಸಿದ್ದೇವೆ ಎಂದು ಎಐಟಿಸಿ ರಾಜ್ಯ ಸಂಚಾಲಕ ಆವರಗೆರೆ ಚಂದ್ರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಸೇರಿದಂತೆ 5 ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ `ಅಂಗನವಾಡಿಗಳನ್ನು ಉಳಿಸಿ- ಅಂಗನವಾಡಿಗಳನ್ನು ಬಲಪಡಿಸಿ’ ಎಂಬ ಘೋಷ ವಾಕ್ಯದಡಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಸಂಯುಕ್ತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ ಮಾತನಾಡಿ, ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಬಂದ್‌ಗೊಳಿಸಿ, ಅಂಗ ನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರ 5 ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧ ಚಲೋ ಹೊರಡುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ 1-4-2023ರಿಂದ ನಿವೃತ್ತಿ ಆದವರಿಗೆ ಗ್ರಾಚುಟಿ ನೀಡುವ ಕುರಿತು ಆದೇಶ ಹೊರಡಿಸುವುದು ಸಮಂಜಸವಲ್ಲ. ಆದ್ದರಿಂದ ಈಗಿನ ಆದೇಶ ತಿದ್ದುಪಡಿ ಮಾಡಿ ಈ ಹಿಂದೆ ನಿವೃತ್ತರಾದ ಎಲ್ಲಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಯಾವುದೇ ಷರತ್ತು ಹಾಗೂ ಸೀಲಿಂಗ್‌ಗೆ ಒಳಪಡಿಸದೇ ತಿದ್ದುಪಡಿ ಆದೇಶ ಹೊರಡಿಸಬೇಕು ಎಂದು ತಿಳಿಸಿದರು.
ಗೌರವ ಧನ ಹೆಚ್ಚಿಸಿ ಇಡುಗಂಟು ನೀಡುವ ಯೋಜನೆ ಜಾರಿಗೊಳಿಸುವುದು, ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ತಜ್ಞರ ಸಮಿತಿ ರಚಿಸಿ, ಪೀಠೋಪಕರಣ ಸೇರಿದಂತೆ ಅನುದಾನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಗುಣಮಟ್ಟದ ಪೌಷ್ಠಿಕ ಆಹಾರ ಸರಬರಾಜು, ನೇಮಕಾತಿ ವಯೋಮಿತಿ ಸಡಿಲಿಕೆ ಮಾಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಚಳ ವಳಿ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ಖಜಾಂಚಿ ವಿಶಾಲಕ್ಷಿ ಮೃತ್ಯುಂಜಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೀತಾ, ಜಗಳೂರು ತಾಲ್ಲೂಕು ಅಧ್ಯಕ್ಷ ಸುಶೀಲಮ್ಮ, ಜಿಲ್ಲಾ ಮುಖಂಡರಾದ ಭರಮಕ್ಕ, ರೇಣುಕಾ, ಮಂಜುಳಾ, ಚನ್ನಮ್ಮ ಸುದ್ದಿಗೋಷ್ಠಿಯಲ್ಲಿದ್ದರು.